ದಿ. ಪುನೀತ್ ರಾಜಕುಮಾರ್‍ಗೆ ಶ್ರದ್ಧಾಂಜಲಿ

ಬ್ಯಾಡಗಿ, ನ15: ಇತ್ತೀಚೆಗೆ ನಿಧನರಾದ ಖ್ಯಾತ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಹಮಾಲರ ಸಂಘದಿಂದ ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಆಶ್ರಯ ಸಮಿತಿ ಸದಸ್ಯ ಪರಶುರಾಮ ಉಜನಿಕೊಪ್ಪ ಅವರು, ಪುನೀತ್ ರಾಜಕುಮಾರವರ ಅಕಾಲಿಕ ನಿಧನ ರಾಜ್ಯದ ಕೋಟ್ಯಾಂತರ ಜನತೆಗೆ ನೋವನ್ನುಂಟು ಮಾಡಿದೆ. ಚಿತ್ರರಂಗದಲ್ಲಿ ಉಜ್ವಲ ಭವಿಷ್ಯವನ್ನು ಹೊಂದಿದ್ದ ಪುನೀತ್ ರಾಜಕುಮಾರ್ ಕೇವಲ ನಟನಾಗಿರದೇ, ಸಮಾಜ ಸೇವೆಯ ಮುಖಾಂತರ ನಿರ್ಗತಿಕರು, ಬಡವರು, ಅನಾಥ ಮಕ್ಕಳನ್ನು ಸಾಕಿ ಸಲುಹಿದ್ದಾರೆ. ಇಂತಹ ಮಹಾನ್ ನಟನನ್ನು ಕಳೆದುಕೊಂಡ ನಾಡು ಬಹಳ ಬಡವಾಗಿದೆ ಎಂದರು.
ಜೆಡಿಎಸ್ ಮುಖಂಡ ಮೋಹನ ಬಿನ್ನಾಳ ಮಾತನಾಡಿ, ಪುನೀತ್ ರಾಜಕುಮಾರ ರಾಜ್ಯದ ಜನರ ಹೃದಯದಲ್ಲಿ ಎಂದೆಂದಿಗೂ ನೆನಪಾಗಿ ಉಳಿಯುವಂತಾಗಿದೆ. ಅವರ ಅಕಾಲಿಕ ನಿಧನ ನಿಜಕ್ಕೂ ಒಂದು ದೊಡ್ಡ ಆಘಾತವಾಗಿದ್ದು, ದೇವರು ಅವರ ಆತ್ಮಕ್ಕೆ ಚಿರ ಶಾಂತಿ ನೀಡಿ ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
ಹಮಾಲರ ಸಂಘದ ಮುಖಂಡ ಹನುಮಂತಪ್ಪ ಬರದನಾಳ ಮಾತನಾಡಿ, ಪುನಿತ್ ರಾಜಕುಮಾರ್ ಅವರು ಸರಳ ಮತ್ತು ಸ್ನೇಹಜೀವಿಯಾಗಿದ್ದು ಸಾಮಾಜಿಕ ಚಿಂತನೆಯುಳ್ಳ ಕನ್ನಡ ಚಿತ್ರರಂಗದ ನಕ್ಷತ್ರರಾಗಿದ್ದರೆಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಪ್ರಕಾಶ ಬಾಣಾಪುರ, ಮಂಜು ಬಾಣಾಪುರ, ರಾಮು ಬರದನಹಳ್ಳಿ, ತಿಪ್ಪೇಶ ಬರದನಹಳ್ಳಿ, ವೀರೇಶ ಕಾಡಸಾಲಿ, ರಾಮು ಬರದನಹಳ್ಳಿ, ಬೀರಪ್ಪ ಹವಳಿ, ಶೇಖಪ್ಪ ಬರದನಹಳ್ಳಿ, ಮಹದೇವಪ್ಪ ಬಾಣಾಪುರ, ಬೀರಪ್ಪ ಆಡಿನವರ, ಕುಮಾರ ಅರಳಿಕಟ್ಟಿ, ರಾಜು ಕಡಕೋಳ, ಸುಂಕಪ್ಪ ಬಾಣಾಪುರ, ಸೋಮಣ್ಣ ಕರ್ಚಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.