ದಿ.ಧ್ರುವನಾರಾಯಣ್ ದಂಪತಿ ಸಮಾಧಿಗೆ ಸಿ.ಪುಟ್ಟರಂಗಶೆಟ್ಟಿ ಭೇಟಿ: ಪುಷ್ಪ ನಮನ ಸಲ್ಲಿಕೆ

ಚಾಮರಾಜನಗರ, ಮೇ.22:- ಚಾ.ನಗರ ಕ್ಷೇತ್ರದಿಂದ ಸತತವಾಗಿ ನಾಲ್ಕನೆ ಬಾರಿಗೆ ಆಯ್ಕೆಯಾದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಭಾನುವಾರ ಹೆಗ್ಗವಾಡಿಯಲ್ಲಿರುವ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿ. ಆರ್. ಧ್ರುವನಾರಾಯಣ್, ಪತ್ನಿ ವೀಣಾ ಧ್ರುವನಾರಾಯಣ್ ಅವರ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿ, ಅವರ ಸೇವೆಯನ್ನು ಸ್ಮರಿಸಿಕೊಂಡರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದ ಆರ್. ಧ್ರುವನಾರಾಯಣ್ ಅವರು ಎರಡು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಜಿಲ್ಲೆಯ ಅಭಿವೃದ್ದಿಯಲ್ಲಿ ತಮ್ಮದೇ ಅದ ಕೊಡುಗೆಯನ್ನು ನೀಡಿದ್ದಾರೆ. ಒಂದು ಮತದಿಂದ ಗೆದ್ದು ಶಾಸಕರಾದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಕ್ಷೇತ್ರದ ಅಭಿವೃದ್ದಿ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿದ್ದರು. 2023ಕ್ಕೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೇಂಬ ಅಚಲ ವಿಶ್ವಾಸವನ್ನು ಹೊಂದಿದ್ದರು ಎಂದು ಪುಟ್ಟರಂಗಶೆಟ್ಟಿ ಗುಣಗಾನ ಮಾಡಿದರು.
ಆದರಂತೆ ಕೋವಿಡ್ ಸಂದರ್ಭದಲ್ಲಿಯು ಸಹ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷದ ವತಿಯಿಂದ ಜನ ಸಾಮಾನ್ಯರಿಗೆ ತಲುಪುವಂತಹ ಕಾರ್ಯಕ್ರಮಗಳನ್ನು ನೀಡಿ, ಹಗಲು ರಾತ್ರಿ ಎನ್ನದೇ ಪಕ್ಷದ ಸಂಘಟನೆಗಾಗಿ ದುಡಿದರು. ಅದರ ಪರಿಣಾಮ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 134 ಸ್ಥಾನಗಳನ್ನು ಪಡೆದು, ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ.
ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಅವರ ಶ್ರಮ ಇದೆ. ನಂಜನಗೂಡು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ರಾಜ್ಯ ಸಂಪುಟದಲ್ಲಿ ಸಚಿವರಾಗಬೇಕೆಂಬ ಬಹಳ ಆಕಾಂಕ್ಷೆಯನ್ನು ಹೊಂದಿದ್ದರು. ವಿಧಿಯಾಟವೇ ಬೇರೆಯಾಯಿತು. ಇಂದು ಅವರು ನಮ್ಮೊಂದಿಗಿಲ್ಲ.
ಅವರ ಪತ್ನಿ ವೀಣಾ ಅವರು ಸಹ ವಿಧಿವಶರಾಗಿದ್ದಾರೆ. ಅವರು ಮಾಡಿರುವ ಸೇವಾ ಕಾರ್ಯಗಳು ಸದಾ ನೆನಪಿನಲ್ಲಿ ಉಳಿಯುತ್ತದೆ. ಅವರ ಆತ್ಮಗಳಿಗೆ ಭಗವಂತ ಚಿರಾಶಾಂತಿಯನ್ನು ನೀಡಲಿ ಎಂದು ಪುಟ್ಟರಂಗಶೆಟ್ಟಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಮುಖಂಡರಾದ ನಾಗವಳ್ಳಿ ನಾಗಯ್ಯ, ಅರುಣ್‍ಕುಮಾರ್, ತಾ.ಪಂ. ಮಾಜಿ ಸದಸ್ಯ ರೇವಣ್ಣ, ಗ್ರಾ.ಪಂ. ಸದಸ್ಯ ಕೆಂಪರಾಜು ಇತರರು ಇದ್ದರು.