ದಿ. ಧರ್ಮಸಿಂಗ್‍ರ ಹುಟ್ಟುಹಬ್ಬ: ನೆಲೋಗಿಯಲ್ಲಿ ಪುತ್ಥಳಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ

ಕಲಬುರಗಿ: ಡಿ.25: ಮಾಜಿ ಮುಖ್ಯಮಂತ್ರಿ ದಿ. ಡಾ. ಎನ್. ಧರ್ಮಸಿಂಗ್ ಅವರ ಹುಟ್ಟುಹಬ್ಬದ ನಿಮಿತ್ಯ ಜೇವರ್ಗಿ ತಾಲ್ಲೂಕಿನ ನೆಲೋಗಿಯಲ್ಲಿ ಶುಕ್ರವಾರ ಕುಟುಂಬಸ್ಥರು ಧರ್ಮಸಿಂಗ್ ಅವರ ಪುತ್ಥಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಮಹಾಮಾರಿ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಕೋವಿಡ್- 19 ನಿಯಮಗಳಡಿ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಯೋಜಿಸಲಾಗಿತ್ತು. ದಿ. ಧರ್ಮಸಿಂಗ್ ಅವರ ಪತ್ನಿ ಶ್ರೀಮತಿ ಪ್ರಭಾವತಿ ಧರ್ಮಸಿಂಗ್, ಪುತ್ರರಾದ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ಡಾ. ಅಜಯಸಿಂಗ್, ರಾಜ್ಯ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ಧರ್ಮಸಿಂಗ್ ಅವರ ಪುತ್ಥಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಮುಖಂಡರಾದ ರಾಜಶೇಖರ್ ಸೀರಿ, ಕಾಶಿರಾಯಗೌಡ ಯಲಗೋಡ್, ಅಭಿಮಾನಿಗಳು ಹಾಗೂ ಪ್ರಮುಖರು ಸಹ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ಅಜಯಸಿಂಗ್ ಅವರು ಮಾತನಾಡಿ, ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ಅಜಾತಶತೃ, ಬಡವರ ಬಂಧು, ದೀನ ದಲಿತರ ನಾಯಕ, ಜಾತ್ಯಾತೀತ ಧುರೀಣರಾದ ಮಾಜಿ ಮುಖ್ಯಮಂತ್ರಿ ಹಾಗೂ ನನ್ನ ತಂದೆ ದಿ. ಎನ್. ಧರ್ಮಸಿಂಗ್ ಸಾಹೇಬರನ್ನು ಅವರ 84ನೇ ಜನ್ಮ ದಿನಾಚರಣೆಯ ಈ ದಿನದಂದು ಗೌರವ ಹಾಗೂ ಹೆಮ್ಮೆಯಿಂದ ನೆನೆಯುತ್ತೇವೆ. ಅವರ ಮಾರ್ಗದರ್ಶನ ಸದಾ ನಮಗೆ ದಾರಿದೀಪ ಎಂದರು.