ದಿ. ಧರ್ಮಸಿಂಗ್‍ರು ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ: ಸುದರ್ಶನ್

ಕಲಬುರಗಿ: ಡಿ.25:ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ ಮಾಜಿ ಸಿಎಂ ಲಿಂ.ಡಾ.ಎನ್.ಧರ್ಮಸಿಂಗ್ ಅವರು ಸಮಾಜವಾದದ ಹಿನ್ನೆಲೆಯುಳ್ಳ ನಾಯಕರಾಗಿದ್ದರು. ನಾಡಿನ ಆರ್ಥಿಕ ಸಾಮಾಜಿಕ ಕ್ರಾಂತಿ ಹಾಗೂ ಈ ಭಾಗಕ್ಕೆ ವಿಶೇಷ ಸ್ಥಾನಮಾನದ ಕೂಗಿಗೆ ಬೆನ್ನೆಲುಬಾಗಿ ನಿಂತವರು ಹಾಗೂ ಡಾ. ನಂಜುಂಡಪ್ಪ ವರದಿಯ ಸಂಪೂರ್ಣ ಅನುಷ್ಠಾನಕ್ಕೆ ಶ್ರಮಿಸಿದ್ದರು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಹೇಳಿದರು.
ಸರ್ವಧರ್ಮ ಸಮನ್ವಯಕಾರ- ಮಾಜಿ ಮುಖ್ಯಮಂತ್ರಿ ಲಿಂ. ಡಾ. ಎನ್. ಧರ್ಮಸಿಂಗ್ ಅವರ 84ನೇ ಜನ್ಮದಿನದ ಪ್ರಯುಕ್ತ ವಿಶ್ವಜ್ಯೋತಿ ಪ್ರತಿಷ್ಠಾನ ನಗರದ ಸುಲಫಲ ಮಠದಲ್ಲಿ ಶುಕ್ರವಾರ ಆಯೋಜಿಸಿದ ಸಮಾರಂಭದಲ್ಲಿ ಹಿರಿಯರಿಗೆ ಧರ್ಮಪ್ರಜೆ' ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಅಧಿಕಾರ ಬಂದಾಗ ಅನೇಕ ಜನ ರಾಜಕಾರಣಿಗಳು ಬದಲಾಗುವುದನ್ನು ಕಾಣುತ್ತೇವೆ. ಆದರೆ ಎನ್. ಧರ್ಮಸಿಂಗ್ ಅವರು, ಶಾಸಕ, ಮಂತ್ರಿ ಕೊನೆಗೆ ಮುಖ್ಯಮಂತ್ರಿ ಆದರೂ ಅವರ ನಡೆ-ನುಡಿಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಜಾತಿ ರಹಿತ ರಾಜಕಾರಣ ಮಾಡಿದ ಅವರ ರಾಜಕೀಯ ಜೀವನ ಇಂದು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ನಾಡಿಗೆ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ಕೊಡುಗೆ ಅಮೋಘವಾದುದು ಎಂದರು. ಪ್ರಸ್ತುತ ಸಮಾಜದಲ್ಲಿ ರಾಜಕಾರಣದ ಅರ್ಥ ಮಾಯವಾಗುತ್ತಿರುವ ಇಂದಿನ ಸಂದಿಗ್ಧದ ಸ್ಥಿತಿಯಲ್ಲಿ ಮೃದು ಸ್ವಭಾವದ ಮಾಜಿ ಮುಖ್ಯಮಂತ್ರಿ ಡಾ. ಎನ್. ಧರ್ಮಸಿಂಗ್ ಅವರು ತಮ್ಮ ಬದ್ಧತೆಯ ವಿಚಾರಗಳಿಂದ ಇಂದು ಸರ್ವರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಸಾಮಾನ್ಯರ ಮಾತಿಗೆ ಗೌರವ ಕೊಟ್ಟು ಅವರ ಕಷ್ಟ ಸು:ಖಗಳಿಗೆ ಧ್ವನಿಯಾಗಿ ನಿಲ್ಲುತ್ತಿದ್ದುದರ ಕಾರಣಕ್ಕಾಗಿಯೇ ಧರ್ಮಸಿಂಗ್ ಅವರು ಶ್ರೀಸಾಮನ್ಯರ ನಾಯಕರೆನಿಸಿಕೊಂಡರು ಎಂದು ಅವರು ಬಣ್ಣಿಸಿದರು. ಸಾನಿಧ್ಯ ವಹಿಸಿದ್ದ ಜಗದ್ಗುರು ಡಾ. ಸಾರಂಗಧರ್ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಧರ್ಮಸಿಂಗ್ ಅವರು ರಾಜಕಾರಣದಲ್ಲಿ ಅಜಾತ ಶತ್ರುವಾಗಿದ್ದರು. ಸರಳ, ಸಜ್ಜನ ವ್ಯಕ್ತಿತ್ವದ ಅವರು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಈ ಭಾಗದಲ್ಲಿ ಧರ್ಮಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಲವ ಕುಶರಂತೆ ಇದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಧರ್ಮಸಿಂಗ್ ಅವರು ನಿರ್ವಹಿಸದ ಖಾತೆ ಇರಲಿಲ್ಲ. ಅಪಾರ ಜನಪರ ಕಾಳಜಿ ಹೊಂದಿದ್ದ ಅವರು ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಹೊಂದಿದ್ದರು ಎಂದರು. ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ್ ತೇಗಲತಿಪ್ಪಿ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರಿಗೆ ಧರ್ಮಸಿಂಗ್ ಅವರೇ ಸಾಟಿ. ರಾಜಕೀಯ ಸೇರಿದಂತೆ ಯಾವುದೇ ರೀತಿಯಿಂದ ನೋಡಿದರೂ ಅವರ ಬದುಕು ಆದರ್ಶವಾಗಿ ನಿಲ್ಲುತ್ತದೆ. ಹಿರಿಯ ನಾಯಕರಾದ ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಎನ್. ಧರ್ಮಸಿಂಗ್ ಅವರ ಸಾಮಾಜಿಕ ಕಳಕಳಿಯಿಂದ ಈ ಭಾಗಕ್ಕೆ 371(ಜೆ) ಜಾರಿ, ಫುಡ್ ಪಾರ್ಕ್, ಕಲಬುರ್ಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಆಬಿವೃದ್ಧಿ, ಇಎಸ್‍ಐ ಆಸ್ಪತ್ರೆ ಸೇರಿದಂತೆ ಅನೇಕ ಮಹತ್ವದ ಯೋಜನೆಗಳು ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು. ಇಂತಹ ಮುತ್ಸದ್ದಿ ನಾಯಕರ ಜನ್ಮದಿನಾಚರಣೆಗಳು ಕುಟುಂಬಕ್ಕೆ ಸೀಮಿತಗೊಳಿಸದೇ ಸಾಮಾಜಿಕವಾಗಿ ಆಚರಣೆ ಆಗಲಿ ಎಂಬ ಉದ್ದೇಶದಿಂದ ಪ್ರತಿ ವರ್ಷ ಈ ರೀತಿಯಾಗಿ ಆಚರಿಸಿ, ಧರ್ಮಸಿಂಗ್ ಅವರನ್ನು ಶಾಶ್ವತವಾಗಿ ಜೀವಂತವಾಗಿಡುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ಡಾ. ಎನ್. ಧರ್ಮಸಿಂಗ್ ಅವರ ಕಟ್ಟಾ ಅನುಯಾಯಿಗಳಾದ ಶಾಂತಗೌಡ ದುಮ್ಮದ್ರಿ, ನೆಲೋಗಿಯ ಸಂಗಣ್ಣ ದೇಸಾಯಿ ಅಲ್ಲಾಗೋಳ್, ದೇವೀಂದ್ರಪ್ಪ ಪೂಜಾರಿ ಬಿರಾಳ್, ಮಾಜಿ ಮೆಯರ್ ಚಂದ್ರಿಕಾ ಪರಮೇಶ್ವರ್, ಅಮೀರ್ ಜಮಾದಾರ್ ಜೇವರ್ಗಿ, ತಿಪ್ಪಣ್ಣ ನಾಯ್ಕೋಡಿ ಕಟ್ಟಿಸಂಗಾವಿ ಅವರಿಗೆಧರ್ಮಪ್ರಜೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ್ ಅವರು ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಉದ್ಯಮಿ ಡಾ. ಕೃಷ್ಣಾಜೀ ಕುಲಕರ್ಣಿ, ಜೀವರ್ಗಿ ತಾಲ್ಲೂಕು ನಿವಾಸಿಗಳ ಸಂಘದ ಅಧ್ಯಕ್ಷ ವಿಜಯಕುಮಾರ್ ದುದ್ದಗಿ ಮಳ್ಳಿ ಅವರು ಮಾತನಾಡಿದರು. ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ್ ಪಾಟೀಲ್ ತಿಳಗೂಳ್, ಕೆಪಿಸಿಸಿ ಸದಸ್ಯ ಹಣಮಂತ್ ಭೂಸನೂರ್, ಸಂಘಟಕರಾದ ಬಿ.ಎಂ. ಪಾಟೀಲ್ ಕಲ್ಲೂರ್(ಕೆ), ಶಿವರಾಜ್ ಅಂಡಗಿ, ರವೀಂದ್ರಕುಮಾರ್ ಭಂಟನಳ್ಳಿ, ಶರಣಬಸವ ಜಂಗಿನಮಠ್, ವಿಶ್ವನಾಥ್ ಸುಲೇಪೇಟ್ ಕೋಡ್ಲಿ, ಮಾಲಾ ಕಣ್ಣಿ, ಮಾಲಾ ದಣ್ಣೂರ್, ಶಿವಾನಂದ್ ಮಠಪತಿ, ಶರಣಬಸಪ್ಪ ನರೋಣಿ ತಾಡತೆಗನೂರ್, ಭುವನೇಶ್ವರಿ ಹಳ್ಳಿಖೇಡ್, ಶರಣರಾಜ್ ಛಪ್ಪರಬಂದಿ, ಪ್ರಭುದೇವ್ ಯಳವಂತಗಿ, ರವಿಕುಮಾರ್ ಶಹಾಪುರಕರ್, ಪ್ರಭವ್ ಪಟ್ಟಣಕರ್, ಮಂಜುಳಾ ಪಾಟೀಲ್, ಕಲ್ಯಾಣಕುಮಾರ್ ಶೀಲವಂತ್, ಪೂಜಾ ಆಲಗೂಡ್, ವಿನೋದ್ ಜೇನವೇರಿ ಮುಂತಾದವರು ಉಪಸ್ಥಿತರಿದ್ದರು.