’ದಿ ಟೆರರಿಸ್ಟ್’ ಚಿತ್ರ ಬಾಲಿವುಡ್‌ಗೆ ರಿಮೇಕ್

ಬೆಂಗಳೂರು, ಸೆ ೧೧- ನಟಿ ರಾಗಿಣಿ ದ್ವಿವೇದಿ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣದಲ್ಲಿ ಅತ್ತ ಕಂಬಿ ಎಣಿಸುತ್ತಿದ್ದರೇ, ಇತ್ತ ರಾಗಿಣಿ ಅಭಿನಯದ ’ದಿ ಟೆರರಿಸ್ಟ್’ ಚಿತ್ರವನ್ನು ರಿಮೇಕ್ ಮಾಡಲು ಬಾಲಿವುಡ್ ಮುಂದಾಗಿದೆ.
ಹೌದು ೨೦೧೮ ರಲ್ಲಿ ತೆರೆಕಂಡಿದ್ದ ಪಿ.ಸಿ.ಶೇಖರ್ ನಿರ್ದೇಶನದ ’ದಿ ಟೆರರಿಸ್ಟ್’ ಹೆಸರಿನ ಸಿನಿಮಾ ರಿಮೇಕ್ ಮಾಡಲು ಬಾಲಿವುಡ್ ಮುಂದಾಗಿದೆಯಂತೆ. ರಾಗಿಣಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ದೊಡ್ಡ ಯಶಸ್ಸು ಗಳಿಸಲಿಲ್ಲವಾದರೂ, ಭಿನ್ನ ಕತೆಗೆ ಹಾಗೂ ಮಹಿಳಾ ಪ್ರಾಧಾನ್ಯ ಸಿನಿಮಾ ಎಂಬ ಕಾರಣಕ್ಕೆ ಗಮನ ಸೆಳೆದಿತ್ತು. ಇದೀಗ ಎಕೆಲಾನ್ ಪ್ರೊಡಕ್ಷನ್‌ನ ನಿರ್ಮಾಪಕ ವಿಶಾಲ್ ರಾಣಾ ಎಂಬುವರು ಸಿನಿಮಾದ ರೀಮೇಕ್ ಹಕ್ಕು ಖರೀದಿಸಿದ್ದು, ಸಿನಿಮಾವನ್ನು ಹಿಂದಿಯಲ್ಲಿ ನಿರ್ಮಿಸಲಿದ್ದಾರಂತೆ.
ರಾಗಿಣಿ ನಟನೆಯ ಪಾತ್ರವನ್ನು ಹಿಂದಿಯಲ್ಲಿ ನಟಿ ವಿದ್ಯಾ ಬಾಲನ್ ಅಥವಾ ಸೋನಮ್ ಕಪೂರ್ ನಿರ್ವಹಿಸಲಿದ್ದಾರಂತೆ. ಅದರಲ್ಲಿಯೂ ನಟಿ ಸೋನಮ್ ಕಪೂರ್ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ’ದಿ ಟೆರರಿಸ್ಟ್’ ಸಿನಿಮಾವು ರೇಷ್ಮಾ ಹಾಗೂ ಆಸ್ಮಾ ಹೆಸರಿನ ಇಬ್ಬರು ಸಹೋದರಿಯರ ಕತೆಯಾಗಿದ್ದು. ಆಸ್ಮಾ ಳ ಅಪಹರಣವಾದಾಗ, ಆಕೆಯನ್ನು ಬಿಡಿಸಿಕೊಂಡು ಬರಲು ಸಹೋದರಿ ರೇಷ್ಮಾ ಕೆಲವು ಸಮಾಜ ವಿರೋಧಿ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇದೇ ಸಿನಿಮಾ ಕತೆಯ ಎಳೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಪಿ. ಸಿ. ಶೇಖರ್, “ಟೆರರಿಸ್ಟ್ ಚಿತ್ರದ ಕಥೆ, ಇತರ ಭಾಷೆಗಳಲ್ಲೂ ಪ್ರಸ್ತುತವಾಗಲಿದೆ ಎಂದು ನಮ್ಮ ನಿರ್ಮಾಪಕ ಅಲಂಕರ್ ಪಾಂಡಿಯನ್ ಬಹಳ ಹಿಂದೆಯೇ ಹೇಳಿದ್ದರು. ಸುದೀಪ್ ಅಭಿನಯದ ದಿ ವಿಲನ್ ಬಿಡುಗಡೆಯಂದೇ ನಾವು ಟೆರರಿಸ್ಟ್ ಚಿತ್ರವನ್ನು ಬಿಡುಗಡೆ ಮಾಡಿದ್ದೇವೆ. ಅದಕ್ಕಾಗಿಯೇ ಈ ಚಿತ್ರ ಸಾಕಷ್ಟು ಹೆಸರು, ಹಣ ಮಾಡಲಾಗಲಿಲ್ಲ. ಇದನ್ನು ಬ್ಲಾಂಕ್, ಬ್ಲೂ ಮತ್ತು ಒನ್ ನೈಟ್ ಸ್ಟ್ಯಾಂಡ್‌ನಂತಹ ಚಲನಚಿತ್ರಗಳ ತಯಾರಕರು ಎತ್ತಿಕೊಂಡಿದ್ದಾರೆ. ಇತರ ಭಾಷಾ ಚಲನಚಿತ್ರೋದ್ಯಮಗಳಲ್ಲಿನ ಜನರು ಅದನ್ನು ನೋಡುವುದು ಅದ್ಭುತವಾಗಿದೆ. ನಾನು ಬರೆದ ಪಾತ್ರಗಳನ್ನು ನಾವು ಮೆಚ್ಚುವ ನಟಿಯರ ಮೂಲಕ ನೀಡುವುದು ನನ್ನ ಕನಸು ನನಸಾಗಿದೆ ”ಎಂದು ಭಾವಪರವಶರಾಗಿ ಹೇಳಿದ್ದಾರೆ.