ದಿ ಕೇರಳ ಸ್ಟೋರಿ ಟ್ರೈಲರ್‌ಗೆ ಕತ್ತರಿ

ತಿರುವನಂತಪುರಂ, ಮೇ.೩- ಈ ವಾರ ಬಿಡುಗಡೆಗೆ ಸಜ್ಜಾಗಿರುವ ” ದಿ ಕೇರಳ ಸ್ಟೋರಿ” ಚಿತ್ರದ ಟ್ರೈಲರ್ ನಲ್ಲಿ ೩೨ ಸಾವಿರ ಮುಸ್ಲಿಂ ಮಹಿಳೆಯರು ಐಸಿಸ್ ಭಯೋತ್ಪಾದಕ ಸಂಘಟನೆ ಸೇರಿದ್ದಾರೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ ಟ್ರೈಲರ್ ಅನ್ನು ಯೂಟೂಬ್ ನಿಂದ ಬದಲು ಮಾಡಲಾಗಿದ್ದು ಚಿತ್ರತಂಡ ಯೂಟರ್ನ್ ಹೊಡೆದಿದೆ.

ಯೂಟೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದ ಟ್ರೈಲರ್ ನಲ್ಲಿ ೩೨,೦೦೦ ಮಹಿಳೆಯರು ಭಯೋತ್ಪಾದಕ ಗುಂಪು ಐಸಿಸ್ ಸೇರಲು ರಾಜ್ಯವನ್ನು ತೊರೆದಿದ್ದಾರೆ ಎಂದು ಹೇಳಿಕೊಂಡು ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ನಿರ್ಮಾಪಕರು ಟ್ರೈಲರ್ ಬದಲು ಮಾಡಿದ್ದಾರೆ.

ಇತ್ತೀಚಿನ ಟ್ರೇಲರ್ ಪ್ರಕಾರ, ಬ್ಯಾನರ್ ಸನ್‌ಶೈನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಹಂಚಿಕೊಳ್ಳಲಾದ ಅಧಿಕೃತ ಯೂಟ್ಯೂಬ್ ನಲ್ಲಿ ಚಿತ್ರ “ಕೇರಳದ ವಿವಿಧ ಭಾಗಗಳ ಮೂವರು ಯುವತಿಯರ ನೈಜ ಕಥೆಗಳ ಆಧಾರವಾಗಿದೆ. ಸಾವಿರಾರು ಮುಗ್ಧ ಮಹಿಳೆಯರನ್ನು ವ್ಯವಸ್ಥಿತವಾಗಿ ಪರಿವರ್ತಿಸಲಾಗಿದೆ, ತೀವ್ರಗಾಮಿಗೊಳಿಸಲಾಗಿದೆ ಮತ್ತು ಅವರ ಜೀವನವನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾದ ಚಿತ್ರದ ಮೊದಲ ಟೀಸರ್, “ಕೇರಳದಲ್ಲಿ ೩೨,೦೦೦ ಸ್ತ್ರೀಯರ ಹೃದಯ ವಿದ್ರಾವಕ ಮತ್ತು ಕರುಳು ಹಿಂಡುವ ಕಥೆಗಳನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದ್ದ ಚಿತ್ರತಂಡ ವಿವಾದಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳು ಚಿತ್ರವನ್ನು ನಿಷೇದಿಸುವಂತೆ ಒತ್ತಾಯಿಸಿದ್ದರು.

ಕೇರಳದಿಂದ ೩೨,೦೦೦ ಮಹಿಳೆಯರು ಐಸಿಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂಬ ಚಿತ್ರದ ಹೇಳಿಕೆ ಕೇರಳಾದ್ಯಂತ ಬಿರುಗಾಳಿ ಎಬ್ಬಿಸಿತು, ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ಅದರ ಪ್ರದರ್ಶನ ನಿಷೇಧಿಸುವಂತೆ ಒತ್ತಾಯಿಸಿದ್ದವು.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ವಿಭಾಗವಾದ ಮುಸ್ಲಿಂ ಯೂತ್ ಲೀಗ್ ೩೨,೦೦೦ ಹುಡುಗಿಯರು ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗಿರುವ ಬಗ್ಗೆ ಸಾಕ್ಷ್ಯವನ್ನು ತೋರಿಸುವವರಿಗೆ ೧ ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸುತ್ತಿದ್ದಂತೆ ವಿವಾದ ತೀವ್ರವಾಗಿ ಹರಡಿತ್ತು

ಹಿಂದೂ ಸೇವಾ ಕೇಂದ್ರದ ಸಂಸ್ಥಾಪಕ ಪ್ರತೀಶ್ ವಿಶ್ವನಾಥ್ ಪ್ರತಿಕ್ರಿಯಿಸಿ, ಕೇರಳದಿಂದ ಯಾರೂ ಐಎಸ್ ಸೇರಲು ಸಿರಿಯಾಕ್ಕೆ ಹೋಗಿಲ್ಲ ಎಂದು ಸಾಬೀತುಪಡಿಸಲು ೧೦ ಕೋಟಿ ರೂ ನೀಡುವುದಾಗಿ ಪ್ರತಿಯಾಗಿ ಪ್ರಕಟಿಸಿದ್ದಾರೆ.

ಸಂಘಪರಿವಾರದ ಅಪಪ್ರಚಾರದ ವಿರುದ್ಧ ಕೇರಳದಿಂದ ವಿರೋಧ ವ್ಯಕ್ತವಾದ ಕಾರಣ ಚಿತ್ರ ನಿರ್ಮಾಪಕರು ಟ್ರೈಲರ್ ಬದಲಾಯಿಸಿದ್ದಾರೆ ಎಂದು ಎಂವೈಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಜ್ ಹೇಳಿದ್ದಾರೆ.