
ತಿರುವನಂತಪುರ.ಮೇ.೧-ಮಲಯಾಳಂನಲ್ಲಿ ತಯಾರಾದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾದಾಚೆ ಈ ಸಿನಿಮಾವನ್ನು ರಾಜಕಾರಣದ ಪಡಸಾಲೆಗೆ ಎಳೆದು ತಂದಿರುವ ಹಿನ್ನೆಲೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಚಿತ್ರವನ್ನು ವಿರೋಧಿಸಿದ್ದಾರೆ.
ಹಲವಾರು ತಪ್ಪು ಕಲ್ಪನೆಗಳನ್ನು ಈ ಸಿನಿಮಾದಲ್ಲಿ ಬಿಂಬಿಸಿರುವುದರಿಂದ ಕೇರಳಕ್ಕೆ ಇದು ಕೆಟ್ಟ ಹೆಸರು ತರುತ್ತಿದೆ ಎಂದಿದ್ದಾರೆ. ಮೇ ೫ ರಂದು ದೇಶದಾದ್ಯಂತ ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ತಡೆಯುವಂತೆ ಕೇರಳ ಕಾಂಗ್ರೆಸ್ ಪಕ್ಷ ಸರಕಾರವನ್ನು ಒತ್ತಾಯಿಸಿದೆ. ಹಸಿ ಸುಳ್ಳುಗಳೇ ತುಂಬಿರುವ ಈ ಸಿನಿಮಾ ಸಮಾಜವನ್ನು ಹಾದಿ ತಪ್ಪಿಸುವುದರಿಂದ ಚಿತ್ರವನ್ನು ರಿಲೀಸ್ ಮಾಡಲು ಬಿಡಬಾರದು ಎಂದು ಮನವಿ ಸಲ್ಲಿಸಿದೆ.
ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ ಕೂಡ ವಿರೋಧವನ್ನು ವ್ಯಕ್ತ ಪಡಿಸಿದ್ದು, ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಈ ಸಿನಿಮಾವನ್ನು ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ. ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಮನವಿ ಮಾಡಿವೆ.
ಎರಡು ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲವ್ ಜಿಹಾದ್ ಸುತ್ತಾ ಹೆಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಮೇ ೦೫ ರಂದು ದೇಶದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹಲವು ಕಡೆ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ.
ಈ ಸಿನಿಮಾದಲ್ಲಿ ಲವ್ ಜಿಹಾದ್ ಜೊತೆಗೆ ಐಸಿಸ್ ಸೇರುವ ಮುನ್ನ ಮಾಡಲಾಗುವ ಬ್ರೈನ್ ವಾಷ್ ಸೇರಿದಂತೆ ಹತ್ತಾರ ವಿಷಯಗಳನ್ನು ಕಥಾಹಂದರದಲ್ಲಿ ಜೋಡಿಸಲಾಗಿದೆಯಂತೆ. ಕೇರಳದ ಯುವತಿಯರ ನಾಪತ್ತೆ ಆದ ಬಳಿಕ ಲವ್ ಜಿಹಾದ್ ಬಲೆ, ಐಸಿಸ್ ಸೇರಿದ ಕಾಲೇಜು ಯುವತಿಯರ ರಿಯಲ್ ಸ್ಟೋರಿಯನ್ನು ತೆರೆಯ ಮೇಲೆ ತಂದಿರೋದಾಗಿ ನಿರ್ದೇಶಕರು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷವು ಈ ವಿಷಯವನ್ನು ಇಟ್ಟುಕೊಂಡು ಹಲವು ಲಾಭಗಳನ್ನು ಪಡೆದುಕೊಳ್ಳಲಿದೆ ಎನ್ನುವುದು ಲೆಕ್ಕಾಚಾರ.
ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇತ್ತು. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿತ್ತು.