ದಿ ಕೇರಳ ಸ್ಟೋರಿ ಚಲನಚಿತ್ರ ಉಚಿತ ವೀಕ್ಷಣೆಗೆ ಚಾಲನೆನಿರೀಕ್ಷೆ ಮೀರಿ ಚಿತ್ರ ವೀಕ್ಷಿಸಿದ ಜನ

ವಿಜಯಪುರ:ಮೇ.17: ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು, ದೇಶದಾದ್ಯಂತ ಸಂಚಲನ ಮೂಡಿಸಿರುವ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಹಿಂದೂಗಳು ಒಟ್ಟಾಗಿ ಕುಳಿತುಕೊಂಡು ವೀಕ್ಷಣೆ ಮಾಡಲು ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಮೂರು ದಿನಗಳ ಕಾಲ ಉಚಿತ ವ್ಯವಸ್ಥೆ ಕಲ್ಪಿಸಿದ್ದು, ಮಂಗಳವಾರ ಪ್ರಥಮ ಶೋ ಪ್ರದರ್ಶನಕ್ಕೆ ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರು ಚಾಲನೆ ನೀಡಿ, ವೀಕ್ಷಣೆ ಮಾಡಿದರು.
ಅತ್ಯಂತ ಉತ್ಸಾಹದಿಂದ ಆಗಮಿಸಿದ ಜನರು ಚಿತ್ರ ಮುಗಿಯುವವರೆಗೂ ಎಲ್ಲೂ ಕದಲದೇ ಅತ್ಯಂತ ಶ್ರದ್ಧೆಯಿಂದ ವೀಕ್ಷಣೆ ಮಾಡಿದರು. ಚಿತ್ರಮಂದಿರದಲ್ಲಿ ಇರುವ ಕುರ್ಚಿಗಳು ತುಂಬಿದ ಮೇಲೆ ಬಂದ ಜನರು ಮರಳಿ ಹೋಗದೆ, ನೆಲದ ಮೇಲೆ ಕುಳಿತು ವೀಕ್ಷಿಸಿರುವುದು ವಿಶೇಷವಾಗಿತ್ತು.
ಯುವ ಸಮೂಹಕ್ಕೆ ದಿ ಕೇರಳ ಸ್ಟೋರಿ ಚಿತ್ರ ವೀಕ್ಷಣೆ ಅಗತ್ಯವಿದೆ. ಇದನ್ನು ನೋಡುವುದರಿಂದ ವಾಸ್ತವ ತಿಳಿಯುವುದಲ್ಲದೆ, ನಮ್ಮಿಂದ ಮುಂದಾಗುವ ತಪ್ಪುಗಳನ್ನು ಆಗದಂತೆ ಜಾಗೃತಗೊಳ್ಳಲು ನೆರವಾಗಲಿದೆ. ಹೀಗಾಗಿ ಎಲ್ಲ ಹಿಂದೂ ಸಹೋದರ, ಸಹೋದರಿಯರು ಕುಟುಂಬ ಸಮೇತ ತೆರಳಿ ವೀಕ್ಷಿಸಲು ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ವೀಕ್ಷಣೆ ಮಾಡಿ ಎಂದು ಶಾಸಕರ ಪುತ್ರ ಹಾಗೂ ಯುವ ನಾಯಕ ರಾಮನಗೌಡ ಪಾಟೀಲ ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಕಿರಣ ಪಾಟೀಲ, ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ್ ಅಣ್ಣಿಗೇರಿ ಸೇರಿದಂತೆ ಮತ್ತಿತರರು ಇದ್ದರು.