ದಿವ್ಯಾ ಹಾಗರಗಿ ನೇತೃತ್ವದಲ್ಲಿ ಹಿಂದೂಗಳ ಪ್ರತಿಭಟನೆ ಬಿಸಿ:ರೈಲು ನಿಲ್ದಾಣದಲ್ಲಿನ ಬಾಲ ಹನುಮಾನ್ ಮಂದಿರ ತೆರವು ಸ್ಥಗಿತ

ಕಲಬುರಗಿ.ಮಾ.17: ನಗರದ ರೈಲು ನಿಲ್ದಾಣದಲ್ಲಿರುವ ಸುಮಾರು 40 ವರ್ಷಗಳ ಹಳೆಯ ಬಾಲ ಹನುಮಾನ್ ಮಂದಿರವನ್ನು ಮಾರ್ಚ್ 17ರೊಳಗೆ ತೆರವುಗೊಳಿಸಲು ಈಗಾಗಲೇ ರೈಲ್ವೆ ಇಲಾಖೆಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ಅದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶ್ರೀಮತಿ ದಿವ್ಯಾ ಹಾಗರಗಿ ಅವರ ನೇತೃತ್ವದಲ್ಲಿ ಶುಕ್ರವಾರ ರೈಲು ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಮಂದಿರದ ತೆರವು ನಿರ್ಧಾರವನ್ನು ಅಧಿಕಾರಿಗಳು ಹಿಂಪಡೆದುಕೊಂಡರು.
ಪಿಎಸ್‍ಐ ಹಗರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರಬಂದಿರುವ ಶ್ರೀಮತಿ ದಿವ್ಯಾ ಹಾಗರಗಿ ಅವರು ರೈಲು ನಿಲ್ದಾಣದಲ್ಲಿನ ಬಾಲ ಹನುಮಾನ್ ಮಂದಿರದ ರಕ್ಷಣೆಗಾಗಿ ಹಿಂದೂಪರ ಸಂಘಟನೆಗಳ ಹೋರಾಟದ ನೇತೃತ್ವವನ್ನು ವಹಿಸಿಕೊಂಡು ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ದಿವ್ಯಾ ಹಾಗರಗಿಯವರು ಮಾತನಾಡಿ, ನಾನು ಕಳೆದ 1962ರಿಂದಲೂ ರೈಲು ನಿಲ್ದಾಣದ ಆವರಣದಲ್ಲಿ ಬಾಲ ಹನುಮಾನ್ ಮಂದಿರವಿರುವುದನ್ನು ನೋಡಿರುವೆ. ಅಲ್ಲದೇ ರೈಲ್ವೆ ನಕಾಶೆಯಲ್ಲಿಯೂ ಸಹ ಮಂದಿರ ಇದೆ. ಹೀಗಾಗಿ ಮಂದಿರ ತೆರವುಗೊಳಿಸುವುದು ಕಾನೂನು ಬಾಹಿರವಾಗುತ್ತದೆ. ಬದಲಾಗಿ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿದರು.
ಯಾವುದೇ ಕಾರಣಕ್ಕೂ ಮಂದಿರವನ್ನು ತೆರವುಗೊಳಿಸಲು ಬಿಡುವುದಿಲ್ಲ. ದೇವಸ್ಥಾನದ ಒಂದು ಇಟ್ಟಿಗೆಯನ್ನೂ ಸಹ ತೆರವುಗೊಳಿಸಲಾಗದು. ಹಾಗೊಂದು ವೇಳೆ ಕೈಗೊಂಡರೆ ಉಗ್ರ ಹೋರಾಟ ರೂಪಿಸುವುದಾಗಿಯೂ ಅವರು ಎಚ್ಚರಿಸಿದರು.
ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಬೇಕು. ಸುಂದರವಾಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯುತ್ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಮುಂದಿನ ಏಪ್ರಿಲ್ 6ರಂದು ಹನುಮ ಜಯಂತಿ ಇದೆ. ಆ ದಿನದಂದು ರೈಲು ನಿಲ್ದಾಣದ ಆವರಣದಲ್ಲಿರುವ ಬಾಲ್ ಹನುಮಾನ್ ಮಂದಿರದಿಂದ ಜಗತ್ ವೃತ್ತದವರೆಗೆ ಬೃಹತ್ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಶ್ರೀಮತಿ ದಿವ್ಯಾ ಹಾಗರಗಿಯವರು ಬೇಡಿಕೆಯ ಮನವಿ ಪತ್ರವನ್ನು ರೈಲು ನಿಲ್ದಾಣದ ಅಧಿಕಾರಿಗಳಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ವ್ಯಾಪಕ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ಹಿಂದೆ ಬಾಲ್ ಹನುಮಾನ್ ಮಂದಿರದ ಜೀರ್ಣೋದ್ದಾರಕ್ಕಾಗಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಅವರು ದೇವಸ್ಥಾನದ ಅಭಿವೃದ್ಧಿ ಹಾಗೂ ಮೇಲ್ಛಾವಣೆ ಹಾಕಲು ಸ್ವತ: ಕಾರ್ಯಕರ್ತರೊಂದಿಗೆ ಕರಸೇವೆಯಲ್ಲಿ ತೊಡಗಿದ್ದರು. ಪೋಲಿಸರು ಅದನ್ನು ತಡೆಯುವ ಮೂಲಕ ಕಾರ್ಯಕರ್ತರ ವಿರೋಧ ಎದುರಿಸಿದರು. ಆದಾಗ್ಯೂ, ಪೂರ್ಣ ಪ್ರಮಾಣದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಅವಕಾಶ ಕೊಡಲಿಲ್ಲ. ಆನಂತರ ದೇವಸ್ಥಾನದ ತೆರವಿಗೆ ನೋಟಿಸ್ ಅಂಟಿಸಿದ್ದರಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.