ದಿವ್ಯಾಂಗರು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಕರೆ

ಅಳ್ನಾವರ, ನ 8- ಸಮಾಜದಲ್ಲಿ ಸಾಮಾನ್ಯ ಜನರಂತೆ ದಿವ್ಯಾಂಗರಿಗೂ ಕೂಡಾ ಸಮಾನ ಹಕ್ಕು ನೀಡಲಾಗಿದೆ. ಅವರು ಸಮಾಜದ ಅವಿಭಾಜ್ಯ ಅಂಗ. ಸರ್ಕಾರ ದಿವ್ಯಾಂಗರಿಗೆ ಸಾಕಷ್ಟು ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಲಾಭ ಪಡೆದುಕೊಂಡು ಸಾಮಾನ್ಯರಂತೆ ಬದುಕು ಕಟ್ಟಿಕೊಳ್ಳಿ ಎಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ನ್ಯಾಯವಾದಿ ಸೋಮಶೇಖರ ಜಾಡರ ಹೇಳಿದರು.
ಪಟ್ಟಣ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡ ದಿವ್ಯಾಂಗರಿಗೆ ಕಾನೂನು ಅರಿವು ಹಾಗೂ ತಿಳುವಳಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ನಮ್ಮ ದೇಶದಲ್ಲಿ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ಕಟ್ಟಲಾಗಿದೆ. ದಿವ್ಯಾಂಗರನ್ನು ಸಮಾಜದ ಮುಖ್ಯ ಅಂಗವಾಗಿ ಸಾಮಾನ್ಯರಂತೆ ಬದುಕುವ ಹಕ್ಕು ನೀಡಲಾಗಿದೆ ಎಂದರು.
ದಿಂವ್ಯಾಂಗರಲ್ಲಿ ಆಧಮ್ಯ ಚೈತನ್ಯ ಅಡಗಿದೆ. ಅವರ ಯೋಗ್ಯತೆ ಅರಿತು ಸಮಾಜದ ಮುಖ್ಯ ವಾಹಿನಿಗೆ ತರಲು ಎಲ್ಲರೂ ಕೈಜೊಡಿಸಬೇಕು. ಸರ್ಕಾರ ದಿವ್ಯಾಂಗರಗೆ ಚಿಕಿತ್ಸೆ ಪಡೆಯಲು ಸೌಲಭ್ಯ ನೀಡಿದೆ. ಮದುವೆ ಮಾಡಿಕೊಂಡರೆ ರೂ. 50 ಸಾವಿರ ವಂತಿಕೆ ನೀಡಲಾಗುವದು. ಈ ಹಣವನ್ನು ಬ್ಯಾಂಕಿನಲ್ಲಿ ಐದು ವರ್ಷ ಠೇವಣಿ ಇಡಲಾಗುವದು. ಉನ್ನತ ಶಿಕ್ಷಣದಲ್ಲಿ ಕೂಡಾ ದಿವ್ಯಾಂಗರಿಗೆ ಸರ್ಕಾರ ಸಾಕಷ್ಟು ಅನುಕೂಲ ನೀಡಿದೆ. ಅಂಗವಿಕಲತೆ ನಿಮ್ಮ ನೂನ್ಯತೆ ಆಗದೆ ನಿಮ್ಮಲ್ಲಿ ಹುದುಗಿರುವ ಚೈತನ್ಯದಿಂದ ಸದೃಢ ಸಮಾಜ ಕಟ್ಟಲು ಸನ್ನದ್ದರಾಗಿ ಎಂದರು.
ದಿವ್ಯಾಂಗರಲ್ಲಿ ಸಾಮಾನ್ಯರಿಗಿಂತ ಅಸಾಮಾನ್ಯ ಬುದ್ದಿತನ ಇರುತ್ತದೆ. ಸಾಧನೆ ಮಾಡುವ ಛಲ ಗಂಭೀರತೆ ನಿಮ್ಮದಾಗಿರಲಿ. ನಿಮಗೆ ಸಾಕಷ್ಟು ಉದ್ಯೋಗವಕಾಶಗಳು ಇವೆ. ಶಿಕ್ಷಣ, ನೌಕರಿಗಳಲ್ಲಿ ಮೀಸಲಾತಿ ಇದೆ. ಉದ್ಯೋಗ ಮಾಡಲು ಸಾಲದ ಸೌಲಭ್ಯ ಇದೆ. ಇಂತಹ ಹಲವಾರು ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಜನಪತ್ರಿನಿಧಿಗಳು ಶ್ರಮಿಸಿ ಎಂದರು.
ದಿವ್ಯಾಂಗರಿಗೆ ಕಾನೂನು ಅರಿವು ಮೂಡಿಸುವಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಕಾನೂನು ಸೇವೆ ಪ್ರಾಧಿಕಾರ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹಿರಿಯ ನ್ಯಾಯವಾದಿ ವೈ.ಪಿ. ಮದ್ನೂರ ಹೇಳಿದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಗಳಾ ಆನಂತ ರವಳಪ್ಪನವರ ಸಸಿಗೆ ನೀರು ಉಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ.ಪಂ. ಉಪಾಧ್ಯಕ್ಷ ನದೀಮ ಕಂಟ್ರ್ಯಾಕ್ಟರ್, ಪ.ಪಂ. ಸದಸ್ಯರಾದ ನೇತ್ರಾವತಿ ಕಡಕೋಳ, ಗೋರಿ ಹಾಗೂ ಅಂಗವಿಕಲರ ಸಂಘದ ರಾಜು ಕಲ್ಯಾಣಕರ , ನಾಗರಾಜ ಗುರ್ಲಹೂಸುರ, ಎಸ್.ಆರ್. ಹಿರೇಹಾಳ ಇದ್ದರು.