ದಿಲ್ಲಿ ಆಸ್ಪತ್ರೆಯಲ್ಲಿ ಮಣಿಪಾಲ ನರ್ಸ್‌ಗಳ ಸೇವೆ

ಮಂಗಳೂರು, ಮೇ ೫- ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಕೊರೋನ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡಿರುವುದರಿಂದ ಮಣಿಪಾಲ ಸಂಸ್ಥೆಯ ಸಹ ಸಂಸ್ಥೆಯಾದ ಹೊಸದಿಲ್ಲಿಯಲ್ಲಿರುವ ಮಣಿಪಾಲ ದ್ವಾರಕಾ ಆಸ್ಪತ್ರೆಯಲ್ಲಿ ಸೇವೆಗಾಗಿ ಮಣಿಪಾಲ ಕೆಎಂಸಿಯ ೧೯ ಮಂದಿ ನರ್ಸ್‌ಗಳು ಮೊದಲ ತಂಡ ನಿನ್ನೆ ಹೊಸದಿಲ್ಲಿಗೆ ತೆರಳಿದೆ.
ದಿಲ್ಲಿಯಲ್ಲೀಗ ಕೊರೋನ ನಿಯಂತ್ರಣಕ್ಕೂ ಸಿಗದಂತೆ ವ್ಯಾಪಕವಾಗಿ ಹರಡಿದ್ದು, ಅಲ್ಲಿ ನರ್ಸಿಂಗ್ ವೃತ್ತಿಪರರ ಹೆಚ್ಚಿನ ಅಗತ್ಯತೆ ಕಂಡುಬಂದಿದೆ. ಹೀಗಾಗಿ ಮಣಿಪಾಲ ದ್ವಾರಕಾ ಆಸ್ಪತ್ರೆಯ ಬೇಡಿಕೆಯ ಮೇರೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ೧೯ ಪರಿಣಿತ ನರ್ಸ್‌ಗಳ ಮೊದಲ ತಂಡ ಪ್ರಯಾಣ ಬೆಳೆಸಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ. ಈ ದಾದಿಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಮ್ಮ ನಿಸ್ವಾರ್ಥ ಸೇವೆಯನ್ನು ನೀಡುವುದಲ್ಲದೆ, ತಮ್ಮ ಆರೈಕೆ ಮತ್ತು ಜೀವ ಉಳಿಸುವ ವೃತ್ತಿಯ ಬಗ್ಗೆ ನಿಜವಾದ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ ಎಂದು ಆಸ್ಪತ್ರೆಯ ಆಡಳಿ ಮಂಡಳಿ ಪ್ರಕಟಣೆಯಲ್ಲಿ ಶ್ಲಾಘಿಸಿದೆ.