ದಿನ, ದಿನಕ್ಕೂ ಸೋಂಕು ಹೆಚ್ಚಳ ದೇಶ ತಳಮಳ

ನವದೆಹಲಿ, ಏ. ೯- ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ದಾಖಲೆಯ ಏರಿಕೆ ಕಂಡಿದ್ದು, ಈ ತಿಂಗಳಲ್ಲಿ ೪ನೇ ಬಾರಿ ೧ ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ಮೊದಲ ಅಲೆಗಿಂತ ೨ನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಪ್ರತಿದಿನ ಹೊಸದಾಗಿ ದಾಖಲಾಗುತ್ತಿರುವ ಕೊರೊನಾ ಸೋಂಕು ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ೧,೩೧,೯೬೮ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗಿನ ಗರಿಷ್ಠ ದಾಖಲೆಯಾಗಿದೆ.
ಇಂದು ಬೆಳಿಗ್ಗೆ ೮ ಗಂಟೆಯ ತನಕ ೭೮೦ ಮಂದಿ ದೇಶದಲ್ಲಿ ಸಾವನ್ನಪ್ಪಿದ್ದು, ಹೊಸದಾಗಿ ೧,೩೧,೯೬೮ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ೬೧,೮೯೯ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಹೊಸದಾಗಿ ದಾಖಲಾಗಿರುವ ಸೋಂಕಿನೊಂದಿಗೆ ದೇಶದಲ್ಲಿ ಈವರೆಗೆ ೧,೩೦,೬೦,೫೪೨ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಇದುವರೆಗೆ ೧,೧೯,೧೩,೨೯೨ ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ೧,೬೭,೬೪೨ ಮಂದಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಛತ್ತೀಸ್ ಗಢ, ಚಂಡೀಘಡ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ, ವಿವಿಧ ರಾಜ್ಯಗಳಲ್ಲಿ ಸೋಂಕು ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
ಏಪ್ರಿಲ್ ತಿಂಗಳಲ್ಲಿ ನಾಲ್ಕನೇ ಬಾರಿಗೆ ೧ ಲಕ್ಷ ದಾಟಿದ್ದು, ಏ. ೫ ರಂದು ೧,೦೩,೫೫೮ ಮಂದಿಗೆ, ಏ. ೭ ರಂದು ೧,೧೫,೭೩೬ ಮಂದಿಗೆ, ನಿನ್ನೆ ೧,೨೬,೭೮೯ ಮಂದಿಗೆ ಹಾಗೂ ಇಂದು ೧,೩೧,೯೬೮ ಮಂದಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೩,೬೪,೨೦೫ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, ಇದುವರೆಗೂ ಒಟ್ಟಾರೆ ೨೫,೪೦,೪೧,೫೮೪ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಸಕ್ರಿಯೆ ಪ್ರಕರಣ ಏರಿಕೆ
ದೇಶದಲ್ಲಿ ಫೆ. ೧೨ರವರೆಗೆ ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೩೫,೯೨೬ ರಷ್ಟಿತ್ತು. ಒಟ್ಟಾರೆ ಸೋಂಕಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. ೧.೨೫ ರಷ್ಟಿತ್ತು.
ಕಳೆದ ಒಂದೂವರೆ ತಿಂಗಳಲ್ಲಿ ಸೋಂಕು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೯,೭೯,೬೦೮ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ಸೋಂಕು ಪ್ರಕರಣದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. ೭.೦೪ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

೯.೪೩ ಕೋಟಿಗೆ ಲಸಿಕೆ
ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ನಡುವೆಯೇ ಲಸಿಕೆ ಹಾಕುವ ಪ್ರಮಾಣವನ್ನು ಕೇಂದ್ರ ಸರ್ಕಾರ ಹೆಚ್ಚು ಮಾಡಿದೆ. ನಿನ್ನೆ ಸಂಜೆಯತನಕ ದೇಶದಲ್ಲಿ ೯,೪೩,೩೪,೨೬೨ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.