ದಿನಸಿಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಜನಜಂಗುಳಿ: ಎಸಿಪಿಯಿಂದ ನೋಟೀಸ್ ಎಚ್ಚರಿಕೆ

ಮೈಸೂರು, ಜೂ.7: ಇಂದು ಬೆಳಿಗ್ಗೆ ವಿಜಯನಗರದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಬಳಿ ನಿರ್ಗತಿಕರಿಗೆ, ಬಡವರಿಗೆ, ಅಶಕ್ತರಿಗೆ ದಿನಸಿಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭ ಜನಜಂಗುಳಿಯೇ ಸೇರಿದ್ದ ಕಾರಣ ಎನ್ ಆರ್.ಠಾಣೆಯ ಎಸಿಪಿ ಶಿವಶಂಕರ್ ಅವರು ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ, ಅಶಕ್ತರಿಗೆ, ನಿರ್ಗತಿಕರಿಗೆ ಇಂದು ದೇವಸ್ಥಾನದ ಆಡಳಿತ ಮಂಡಳಿಯವರು ಅಗತ್ಯ ವಸ್ತುಗಳ ದಿನಸಿ ಕಿಟ್ ವಿತರಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ದಿನಸಿ ಕಿಟ್ ಪಡೆಯಲು ಜನಜಂಗುಳಿಯೇ ಸೇರಿತ್ತು. ನೂಕಾಟ, ತಳ್ಳಾಟ ಕೂಡ ನಡೆಯಿತು. ಈ ವೇಳೆ ಸ್ಥಳಕ್ಕಾಗಮಿಸಿದ ಎನ್.ಆರ್.ಠಾಣೆಯ ಎಸಿಪಿ ಶಿವಶಂಕರ್ ಅವರು ದೇಗುಲದ ಸಂಸ್ಥಾಪಕ ಪೆÇ್ರ.ಭಾಷ್ಯಂ ಸ್ವಾಮೀಜಿ ಅವರಲ್ಲಿ ನೋಟೀಸ್ ನೀಡುವುದಾಗಿ ಎಚ್ಚರಿಸಿದರಲ್ಲದೆ, ನೀವು ಅವರವರ ಮನೆಗಳಿಗೆ ಹೋಗಿ ಕೊಡಿ, ದೇವಸ್ಥಾನಕ್ಕೆ ಕರೆದು ವಿತರಿಸುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇದರಿಂದ ತೊಂದರೆಯಾಗಲಿದೆ ಎಂದರಲ್ಲದೆ, ಬಂದವರನ್ನು ವಾಪಸ್ ಕಳಿಸತೊಡಗಿದರು.
ಈ ವೇಳೆ ಪೆÇ್ರ.ಭಾಷ್ಯಂ ಸ್ವಾಮೀಜಿ ನಿರ್ಗತಿಕರಿಗೆ, ಅಶಕ್ತರಿಗೆ ಲಾಕ್ ಡೌನ್ ನಿಂದ ತೊಂದರೆಯಾಗಿದೆ. ಅವರು ಕೆಲಸವಿಲ್ಲದೆ ಒಪ್ಪತ್ತಿನ ಊಟಕ್ಕೆ ಪರದಾಡುತ್ತಿರುವ ಕಾರಣ ಅವರನ್ನು ದಿನಸಿ ಕಿಟ್ ನೀಡಲಾಗುವುದು, ಬಂದು ಸ್ವೀಕರಿಸಿ ಎಂದಿದ್ದೆವು. ಈಗ ಅವರನ್ನು ವಾಪಸ್ ಕಳುಹಿಸಿದರೆ ಅವರಿಗೂ ಬೇಸರವಾಗಲಿದೆ ಎಂದರು.
ಎಸಿಪಿ ಶಿವಶಂಕರ್ ನೀವು ದಿನಸಿ ಕಿಟ್ ಕೊಡುವುದನ್ನು ನಾನು ಬೇಡ ಅಂದಿಲ್ಲ, ನೀವು ಅವರಿರುವಲ್ಲಿಯೇ ಹೋಗಿ ಕಿಟ್ ನೀಡಿ. ದೇವಸ್ಥಾನಕ್ಕೆ ಕರೆಸಿಕೊಂಡು ಕಿಟ್ ನೀಡಿ ಎಂದಿಲ್ಲ ಎಂದು ಖಡಕ್ಕಾಗಿ ಹೇಳಿ ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿದರು ಎನ್ನಲಾಗಿದೆ.
ಇಂದು ಅದರಲ್ಲೂ ದಿನಸಿ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅನ್ ಲಾಕ್ ಇದ್ದ ಕಾರಣ ಸಹಜವಾಗಿಯೇ ಜನರು ಸೇರಿರುವುದು ಕಂಡು ಬಂತು.