ದಿನಪತ್ರಿಕೆ ವಿತರಕರ ಕಾರ್ಯಕ್ಕೆ ಶ್ಲಾಘನೆ

ಗೌರಿಬಿದನೂರು.ಮೇ೨೯:ಸಂಕಷ್ಟದ ದಿನಗಳಲ್ಲಿಯೂ ತನ್ನ ನಿತ್ಯದ ಕಾರ್ಯಗಳನ್ನು ಮುಂದುವರೆಸುತ್ತಾ ಮನೆಮನೆಗೆ ದಿನಪತ್ರಿಕೆಗಳನ್ನು ಹಂಚುವ ವಿತರಕರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಪಾದರ್ ಅಲೋಯ್ಸೀಸ್ ತಿಳಿಸಿದರು.
ನಗರದಲ್ಲಿ ನಿತ್ಯ ದಿನಪತ್ರಿಕೆಗಳನ್ನು ಹಂಚುವ ಹುಡುಗರು ಹಾಗೂ ವಿತರಕರಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ದೇಶ ಹಾಗೂ ವಿದೇಶಗಳಲ್ಲಿ ನಡೆಯುವ ವಿದ್ಯಮಾನಗಳನ್ನು ನಿತ್ಯ ಹೊತ್ತು ಮನೆಬಾಗಿಲಿಗೆ ತರುವ ಪತ್ರಿಕೆಗಳ ಕಾರ್ಯ ಅಭಿನಂದನಾರ್ಹವಾದುದು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತಪ್ಪದೆ ನಿತ್ಯ ಓದುಗರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುವ ಜವಾಬ್ದಾರಿ ಹೊತ್ತಿರುವ ಏಜೆಂಟರು ಹಾಗೂ ವಿತರಕರ ಕಾರ್ಯ ಮೆಚ್ಚುವಂತದ್ದಾಗಿದೆ. ಈ ನಿಟ್ಟಿನಲ್ಲಿ ಅವರ ಕುಟುಂಬಗಳಿಗೆ ಆಸರೆಯಾಗುವ ಅಗತ್ಯ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಲಾಗಿದೆ. ಪತ್ರಿಕೆ ಹಂಚುವ ಏಜೆಂಟರು ತಮ್ಮ ಬಳಿ ಕಾರ್ಯ ನಿರ್ವಹಿಸುವ ಬಾಲಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಜತೆಗೆ ಪತ್ರಿಕಾ ವಿತರಣಾ ಕಾರ್ಯ ಮುಗಿದ ಕೂಡಲೇ ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಸೇರಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ಪತ್ರಿಕಾ ಏಜೆಂಟ್ ಎಂ.ಟಿ.ಹನುಮಂತರೆಡ್ಡಿ ಮಾತನಾಡಿ, ವರ್ಷದ ೩೬೦ ದಿನಗಳ ಕಾರ್ಯ ನಿರಂತರವಾಗಿ ಮಳೆ, ಗಾಳಿ, ಚಳಿ ಹಾಗೂ ಕೋವಿಡ್ ಸಂಕಷ್ಟದ ಸಮಯದಲ್ಲೂ ಕಾರ್ಯನಿರ್ವಹಿಸುವ ಪತ್ರಿಕೆಗಳ ವಿತರಕರ ಸಮಸ್ಯೆಗಳನ್ನು ಅರಿತು ಅವರ ಬದುಕಿಗೆ ಸಹಕಾರಿಯಾಗಿ ಅಗತ್ಯ ಆಹಾರ ವಸ್ತುಗಳನ್ನು ವಿತರಿಸುವ ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿದೆ. ಬಡತನದ ಜತೆಗೆ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿರುವ ದಾನಿಗಳಿಗೆ ನಾವುಗಳು ಋಣಿಯಾಗಿರುತ್ತೇವೆ ಎಂದು ಹೇಳಿದರು.