ಕೆಜಿಎಫ್,ಜೂ,೯-ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಮುಖ್ಯಶಿಕ್ಷಕರು ಮಕ್ಕಳಿಗೆ ಕನ್ನಡ ದಿನಪತ್ರಿಕೆಗಳನ್ನು ಪ್ರಾರ್ಥನಾ ಸಮಯದಲ್ಲಿ ಓದಿಸಿ ಸಮಾಜದ ಆಗೂ ಹೋಗುಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕೆಂದು ಬಿಇಒ ಚಂದ್ರಶೆಖರ್ ಮುಖ್ಯ ಶಿಕ್ಷಕರ ಸಭೆಯಲ್ಲಿ ತಿಳಿಸಿದರು.
ಕೆಜಿಎಫ್ ತಾಲೂಕಿನ ತಾಲೂಕಿನ ೨೦೨೩-೨೪ ನೇ ಸಾಲಿನ ಶೈಕ್ಷಣಿಕ ವರ್ಷದ ಸರಕಾರಿ ಮತ್ತು ಖಾಸಗಿ ಅನುದಾನ, ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಸಂತ ಮೇರಿಸ್ ಪ್ರೌಢಶಾಲೆಯಲ್ಲಿ ಬಿಇಒ ಚಂದ್ರಶೇಖರ್‌ರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೆಜಿಎಫ್ ತಾಲ್ಲೂಕಿನಾದ್ಯಂತ ಸರಕಾರಿ ಶಾಲೆಗಳಲ್ಲಿ ವಿಶೇಷ ದಾಖಲಾತಿ ಆಂದೋಲನ ನಡೆಸಿ ಮಕ್ಕಳನ್ನು ಸರಕಾರಿ ಶಾಲೆಗೆ ಆಕರ್ಷಿಸುವ ಪ್ರಯತ್ನ ಮಾಡಬೇಕಿದೆ ಎಂದರು.
ಶಾಲೆಗೆ ಆಗಮಿಸಿದ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳವಂತೆ ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು. ಶಾಲೆಗಳಲ್ಲಿ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಿ ಸರಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಣೆ ಮಾಡಬೇಕಿದೆ ಎಂದರು.
ಅರ್ಧ ಗಂಟೆ ಮುಂಚಿತವಾಗಿ ಮುಖ್ಯ ಶಿಕ್ಷಕರು ಶಾಲೆಗೆ ಬನ್ನಿ, ಬೆಳಗ್ಗೆ ಶಾಲೆ ಪ್ರಾರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಮುಖೋಪಾಧ್ಯರು ಹಾಜರಿದ್ದು, ಸಹ ಶಿಕ್ಷಕರ ಕೈಯಲ್ಲಿ ಮಕ್ಕಳಿಗೆ ಉತ್ತಮ ಬೋಧನೆ ಮಾಡುವ ಜಾವಬ್ದಾರಿ ಮುಖ್ಯ ಶಿಕ್ಷರು ಹೊರಬೇಕು, ಶಾಲೆಗಳ ಅಂಗಳ ಸ್ವಚ್ಚಗೊಳಿಸಿ ಪ್ರಾರ್ಥನಾ ಸಮಯದಲ್ಲಿ ಕಡ್ಡಾಯವಾಗಿ ಕನ್ನಡ ದಿನಪತ್ರಿಕೆಗಳನ್ನು ಮಕ್ಕಳ ಕೈಯಲ್ಲಿ ಓದಿಸುವ ಕೆಲಸ ಮಾಡಬೇಕಿದೆ ಎಂದರು.
ಶಾಲೆಗಳಲ್ಲಿ ಮಕ್ಕಳ ಅಗತ್ಯ ಸಿದ್ದತೆಗಳ ಬಗ್ಗೆ ಸಲಹೆ ನೀಡಿದ್ದರು, ಅದರಂತೆ ಪ್ರತಿ ಶಾಲೆಯಲ್ಲಿ ಒಂದು ವರ್ಷದ ಏನೆಲ್ಲಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂಬುದರ ಬಗ್ಗೆ ಶಾಲೆಯ ಮುಖ್ಯಸ್ಥರು, ಎಸ್.ಡಿ.ಎಂ.ಸಿ ಸಮ್ಮಖದಲ್ಲಿ ವರ್ಷದ ಆಗು-ಹೋಗುಗಳ ಬಗ್ಗೆ ಮುಖ್ಯ ಶಿಕ್ಷಕರು ಚರ್ಚಿಸಬೇಕು, ಶಿಕ್ಷಕರ ಸಹಕಾರದಿಂದ ವಾರ್ಷಿಕ ಯೋಜನೆಯನ್ನು ರೂಪಿಸಬೇಕು, ಈಗಾಗಲೇ ಅಧಿಕಾರಿಗಳು ಸಭೆ ನಡೆಸಿ, ಯಾರೋ ರೂಪಿಸಿರುವ ಯೋಜನೆಯನ್ನೇ ಜೆರಾಕ್ಸ್ ಅಂಗಡಿಯಿಂದ ತಂದು ಗೋಡೆಗೆ ನೇತು ಹಾಕಿ ನೋಡಿಕೊಳ್ಳಿ ಎನ್ನಬಾರದು ಎಂದು ಮುಖ್ಯಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಿದರು, ಶಿಕ್ಷಕರೇ ಕುಳಿತು ವಾರ್ಷಿಕ ಯೋಜನೆ ರೂಪಿಸಬೇಕೆಂದರು.
ಮಕ್ಕಳ ದಾಖಲಾತಿ ಮಾಡಿಕೊಳ್ಳುವುದು, ವಾರ್ಷಿಕ ಕಾರ್ಯಸೂಚಿ ನಡೆಸುವುದು, ನಲಿಕಲಿ ತರಗತಿ ತಯಾರಿ, ಶಾಲಾ ಕೈತೋಟ, ಮಕ್ಕಳ ದಾಖಲಾತಿ ವಯೋಮೀತಿ, ಮಕ್ಕಳ ವರ್ಗಾವಣೆ ಪತ್ರ ವಿತರಣೆ ವಿದ್ಯಾರ್ಥಿಗಳ ಶೈಕ್ಷಣಿಕ ವಿಶ್ಲೇಷಣಾ ತಂತ್ರಾಂಶಕ್ಕೆ ನಮೂದಿಸುವುದು ಮತ್ತು ಮುಂದಿನ ತರಗತಿಗೆ ಉತ್ತೀರ್ಣರಾಗಿರುವ ಬಗ್ಗೆ ದಾಖಲಾತಿ ನಮೂದಿಸುವುದು, ಎಸ್.ಡಿ.ಎಂ ಸಿಗಳ ಸಭಾ ನಡಾವಳಿ, ಅನುದಾನಗಳ ಕ್ರಿಯಾಯೋಜನೆ, ಅಕ್ಷರ ದಾಸೋಹ, ಕ್ಷೀರಭಾಗ್ಯ ನಿರ್ವಹಣೆ ಕಾರ್ಯಕ್ರಮಗಳ ಬಗ್ಗೆ ಸಮಗ್ರವಾಗಿ ಮುಖ್ಯ ಶಿಕ್ಷಕರಿಗೆ ಸಲಹೆ ನೀಡಲಾಯಿತು, ಜೂನ್ ತಿಂಗಳಿನಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ವರ್ಷದ ಸಮಗ್ರ ಯೋಜನೆಯನ್ನು ಮಾಡಿಕೊಳ್ಳಿ ಎಂದು ಮುಖ್ಯ ಶಿಕ್ಷಕರ ಸಭೆಯಲ್ಲಿ ಶಿಕ್ಷಣಾಧಿಕಾರಿಗಳು ತಿಳಿಸಿದರು.
ಕೆಜಿಎಫ್ ಬಿಇಓ ಚಂದ್ರಶೇಖರ್, ತಾಲೂಕಿನ ನೋಡಲ್ ಅಧಿಕಾರಿಗಳು ಶಿಕ್ಷಕರಿಗೆ ಒಂದು ದಿನದ ತರಬೇತಿ ನೀಡಿದರು.
ವಾರ್ಷಿಕ ಕ್ರಿಯಾಯೋಜನೆ, ಶಾಲಾ ಪಂಚಾಗ, ವಾರ್ಷಿಕ ವಾರ ಹಂಚಿಕೆ ಸೇರಿದಂತೆ ಒಂದು ವರ್ಷದಲ್ಲಿ ಕೈಗೊಳ್ಳಬಹುದಾದ ಎಲ್ಲಾ ಶೈಕ್ಷಣಿಕ ಯೋಜನೆಗಳನ್ನು ಸ್ವತಃ ಶಾಲಾ ಶಿಕ್ಷಕರೇ ರೂಪಿಸಿಕೊಳ್ಳಬೇಕು. ಶಾಲೆಗಳ ಅಭಿವೃದ್ದಿಗೆಂದು ಬಂದಿರುವ ಅನುದಾನ ಆಯಾ ವರ್ಷವೇ ಸದುಪಯೋಗಪಡಿಸಿಕೊಳ್ಳಬೇಕು, ಮುಂದಿನ ಸಾಲಿಗೆ ಉಳಿಸಲು ಹೋದರೆ ಅದನ್ನು ಖರ್ಚು ಮಾಡಲು ಇಲಾಖೆಯ ಮುಖ್ಯಸ್ಥರ ಅನುಮತಿ ಪಡೆಯಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ ೧೦ನೇ ತರಗತಿಯ ಫಲಿತಾಂಶ ಕೆಜಿಎಫ್ ತಾಲೂಕು ಎರಡನೇ ಸ್ಥಾನ ಪಡೆದುಕೊಂಡಿದ್ದು ನಿಮ್ಮೆಲ್ಲರ ಶ್ರಮದಿಂದ ಎರಡನೇ ಸ್ಥಾನಕ್ಕೆ ಬಂದಿದೆ ಮುಖ್ಯ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಇಒ ಚಂದ್ರಶೇಖರ್ ತಿಳಿಸಿದರು.
ಸಂತ ಮೇರಿಸ್‌ನ ಮುಖ್ಯ ಶಿಕ್ಷಕಿ ಎಸ್.ಆರ್.ರಾಣಿ, ದೈಹಿಕ ಶಿಕ್ಷಣಾಧಿಕಾರಿ ಬಾಬು, ಬಿಜಿಎಂಎಲ್ ಶಾಲಾ ಮುಖ್ಯ ಶಿಕ್ಷಕ ಮಾಲತೇಶ್ ಇದ್ದರು.
.