ದಿನದಿನಕ್ಕೂ ಹೆಚ್ಚುತ್ತಿರುವ ಸೋಂಕು : ಜನ ತಬ್ಬಿಬ್ಬು


ನವದೆಹಲಿ,ಏ.೨೪- ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮಿತಿಮೀರಿ ಹರಡುತ್ತಿದೆ. ಅಂಕೆಗೆ ಸಿಗದಂತೆ ಸೋಂಕಿನ ನಾಗಾಲೋಟ ಮುಂದುವರಿದಿರುವುದರಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಭರ್ತಿಯಾಗಿವೆ, ಹಾಸಿಗೆ, ಔಷಧಿ, ಆಮ್ಲಜನಕ ಕೊರೆತೆಯಿಂದ ಸೋಂಕಿತರು ನರಳಾಡಿ ಸಾವನ್ನಪ್ಪುತ್ತಿರುವುದು ಸೋಂಕಿನ ಭೀಕರತೆಗೆ ಕನ್ನಡಿ ಹಿಡಿದಿದೆ.

ಜಗತ್ತಿನಲ್ಲಿ ಒಂದೇ ದಿನ ಅತಿ ಹೆಚ್ಚಿನ ಸೋಂಕು ದಾಖಲಾಗಿದ್ದ ದೇಶದಲ್ಲಿ ಇದೀಗ ಮತ್ತೆ ಮತ್ತೆ ದಾಖಲೆಯ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದೆ. ಇಂದೂ ಕೂಡ ೩.೪೬,೭೮೬ ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು ೨,೬೨೪ ಮಂದಿ ಸಾವನ್ನಪ್ಪಿದ್ದಾರೆ.

ನಿತ್ಯ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಕೊರತೆ ಎದುರಾಗಿರುವುದರಿಂದ ಪರಿಸ್ಥಿತಿ ನಿಭಾಯಿಸಲು ರಾಜ್ಯ, ಕೇಂದ್ರ ಸರ್ಕಾರಗಳು ಕೈಚೆಲ್ಲಿವೆ. ಜೊತೆಗೆ ಆಸ್ಪತ್ರೆಗಳೂ ಕೂಡ. ಹೀಗಾಗಿ ಸೋಂಕಿನಿಂದ ಸಾವನ್ನಪ್ಪುವ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ದೇಶದ ಜನರಿಗೆ ಈಗ ದೇವರೇ ದಿಕ್ಕು ತೋರಿಸಬೇಕಾಗಿದೆ.

ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಸೇರಿದಂತೆ ಅನೇಕ ರಾಜ್ಯಗಳಲ್ಲಿ ದಾಖಲೆಯ ಸೋಂಕು ನಿತ್ಯ ದೃಢಪಡುತ್ತಿದೆ.ಇದರಿಂದ ವೈದ್ಯಕೀಯ ಆಮ್ಲಜನಕದ ಅಭಾವ ಎದುರಾಗಿದೆ. ಮಾಹಾರಷ್ಟ್ರದಲ್ಲಿ ಒಂದೇ ದಿನ ೭೭೩ ಮಂದಿ, ದೆಹಲಿಯಲ್ಲಿ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ದಾಖಲೆ ಏರಿಕೆ:

ಜಗತ್ತಿನಲ್ಲಿ ಭಾರತದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಧೃಡಪಟ್ಟಿದೆ. ಇಂದು ಬೆಳಗ್ಗೆ ೮ ಗಂಟೆಯ ತನಕ ದೇಶದಲ್ಲಿ ೩,೪೬,೭೮೬ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ೨೬೨೪ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.೨,೧೯,೮೩೮ ಮಂದಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೊಸದಾಗಿ ದಾಖಲಾಗಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ ೧,೬೬,೧೦,೪೮೧ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೧,೩೮,೬೭,೯೯೭ಕ್ಕೆ ಹೆಚ್ಚಾಗಿದೆ. ಇಲ್ಲಿಯತನಕ ದೇಶದಲ್ಲಿ ಸೋಂಕಿನಿಂದ ೧,೮೯,೫೪೪ ಮಂದಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

೨೫ ಲಕ್ಷ ದಾಟಿದ ಸಕ್ರಿಯ ಪ್ರಕರಣ

ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಅಂಕೆ ಸಿಗದಷ್ಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೨೫ ಲಕ್ಷ ಗಡಿ ದಾಟಿದೆ.

ಸದ್ಯ ದೇಶದಲ್ಲಿ ೨೫,೫೨,೯೪೦ ಮಂದಿ ಸಕ್ರಿಯ ಸೋಂಕಿತರಿಗೆ ದೇಶದ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ದೆಹಲಿ, ಆಂದ್ರಪ್ರದೇಶ,ಉತ್ತರ ಪ್ರದೇಶ, ಉತ್ತರಖಾಂಡ್,ಪಂಜಾಬ್, ಹರಿಯಾಣ, ಛತ್ತೀಸ್ ಗಡ, ಚಂದಿಘಡ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೋಂಕು ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ.

ಇದರಿಂದಾಗಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

? ದೇಶದಲ್ಲಿ ಇಂದೂ ಕೂಡ ದಾಖಲೆಯ ಸೋಂಕು ದೃಢ
? ೩.೪೬,೭೮೬ ಮಂದಿಗೆ ಸೋಂಕು, ೨,೬೨೪ ಮಂದಿ ಸಾವು
? ದೇಶದಲ್ಲಿ ಸಾವು ಮತ್ತು ಸೋಂಕಿನಲ್ಲಿ ದಾಖಲೆ
? ಸೋಂಕಿನ ವಿಷಯದಲ್ಲಿ ಅಮೇರಿಕಾ ಹಿಂದಿಕ್ಕಿದ ಭಾರತ
? ಮಹಾರಾಷ್ಟ್ರ, ದೆಹಲಿ, ಕರ್ನಾಟಕದಲ್ಲಿ ದಾಖಲೆ
? ದೇಶದಲ್ಲಿ ೧.೬೬ ಕೋಟಿಗೆ ಸೋಂಕು
? ಈವರೆಗೆ ೧,೩೨ ಕೋಟಿ ಚೇತರಿಕೆ
? ದೇಶದಲ್ಲಿ ಒಟ್ಟಾರೆ ೧,೮೯ ಲಕ್ಷಕ್ಕೂ ಅಧಿಕ ಸಾವು
? ೨೫ ಲಕ್ಷಕ್ಕೂ ಅಧಿಕ ಮಂದಿಗೆ ಸಕ್ರಿಯ ಪ್ರಕರಣ
? ದೇಶದಲ್ಲಿ ೧೩,೮೩,೭೯,೮೩೨ ಮಂದಿಗೆ ಲಸಿಕೆ