ದಿನದರ್ಶಿಕೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ : ಬಿ.ಎಸ್.ವಿನಯ್

ಚಾಮರಾಜನಗರ, ಡಿ.21-ದಿನದರ್ಶಿಕೆಗಳು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ವಿನಯ್ ಅಭಿಪ್ರಾಯಪಟ್ಟರು.
ಅವರು ನಗರದ ಮಹಾಮನೆಯಲ್ಲಿ ನಡೆದ ವೀರಶೈವ ಲಿಂಗಾಯಿತ ನೌಕರರ ಸಂಘ, ಬಸವೇಶ್ವರ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕ್ಯಾಲೆಂಡರ್ ಬಿಡುಗಡೆ ಸಮಾರಾಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯನಿಗೆ ದೈನಂದಿನ ಆಗುಹೋಗುಗಳನ್ನು ತಿಳಿಯಲು ಕ್ಯಾಲೆಂಡರ್ ಅತ್ಯವಶ್ಯಕವಾಗಿದೆ. ವ್ಯವಹಾರಿಕವಾಗಿ ನಡೆಯಲು ಕ್ಯಾಲೆಂಡರ್ ಬಹಳ ಮುಖ್ಯವಾಗಿದೆ. ಹಿಂದೆ ಕೇವಲ ಸೂರ್ಯ, ಚಂದ್ರ, ಕತ್ತಲು, ಬೆಳಕು ನೋಡಿಕೊಂಡು ವ್ಯವಹರಿಸುತ್ತಿದ್ದರು.
ಇಂದು ಎಲ್ಲಾ ವ್ಯವಹಾರಗಳು ಮತ್ತು ಯಾವುದೇ ಕೆಲಸ ಕಾರ್ಯಗಳು ಇಂಗ್ಲೀಷ್ ಕ್ಯಾಲೆಂಡರ್ ಮೂಲಕವೇ ನಡೆಯುತ್ತಿದೆ. ನಮ್ಮ ದೇಶದ ರಾಷ್ಟ್ರೀಯ ಕ್ಯಾಲೆಂಡರ್‍ನಲ್ಲಿ ಎಲ್ಲಾ ಧರ್ಮದವರ ಆಚರಣೆಗಳ ಬಗ್ಗೆ ನಮೂದಿಸಿರುತ್ತದೆ. ನಮ್ಮ ಹಿಂದೂ ಪಂಚಾಂಗದಲ್ಲಿ ನಕ್ಷತ್ರ, ರಾಶಿ, ಹಬ್ಬಗಳ ಆಚರಣೆ ಬಗ್ಗೆ ನಮೂದಾಗಿರುತ್ತದೆ ಎಂದು ಕ್ಯಾಲೆಂಡರ್‍ನ ಮಹತ್ವದ ಬಗ್ಗೆ ತಿಳಿಸಿದರು.
ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯಿತರ ನೌಕರರ ಸಂಘದ ಪದಾಧಿಕಾರಿಗಳು ಮುತುವರ್ಜಿ ವಹಿಸಿ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದವರ ಭಾವಚಿತ್ರಗಳನ್ನು ಕ್ಯಾಲೆಂಡರ್‍ನಲ್ಲಿ ಅಳವಡಿಸಿ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ನಂತರ ಪ್ರಾಯೋಜಕರ ಸಮ್ಮುಖದಲ್ಲಿ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರಶೈವ ನೌಕರರ ಸಂಘದ ಅಧ್ಯಕ್ಷ ಡಾ|| ಪರಮೇಶ್ವರಪ್ಪ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ಪ್ರಕಾಶ್, ಪದಾಧಿಕಾರಿಗಳಾದ ಶಿವಕುಮಾರಸ್ವಾಮಿ, ಆರ್.ಎಸ್. ಲಿಂಗರಾಜು, ಎಸ್. ಮಹದೇವಸ್ವಾಮಿ, ಲಿಂಗರಾಜಮೂರ್ತಿ, ಕೊಂಗಳಪ್ಪ, ಮಹದೇವಸ್ವಾಮಿ, ಪರಶಿವಪ್ಪ ಹಾಗೂ ನಾಗೇಂದ್ರಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು. ಮಹದೇವಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.