ದಿದ್ದಿಗೆ ಗ್ರಾ.ಪಂ. ಪಿಡಿಒ ಟೇಬಲ್ ಮೇಲೆ ಕೊಳಚೆ ಹಾಕಿ ಪ್ರತಿಭಟನೆ-ಚರಂಡಿ ಸ್ವಚ್ಛಗೊಳಿಸದ ಪಿಡಿಓ ವಿರುದ್ಧ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಜಗಳೂರು.ಜ.22; ಗ್ರಾಮದಲ್ಲಿ ಹತ್ತಾರು ತಿಂಗಳಿಂದ ಚರಂಡಿಗಳನ್ನು ಸ್ವಚ್ಛಗೊಳಿಸದೆ, ಕರ್ತವ್ಯಕ್ಕೂ ಹಾಜರಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ದಿದ್ದಿಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಯ ಪಿಡಿಓ ಚೇಂಬರ್ ಮೇಲೆ ಕೊಳಚೆ ರಾಶಿ ಹಾಕಿ ಪ್ರತಿಭಟಿಸಿದ್ದು, ಹಲವು ತಿರುವುಗಳನ್ನು ಪಡೆದುಕೊಂಡಿದೆ.ಸುಮಾರು 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದಿದ್ದಿಗೆ ಗ್ರಾಮದಲ್ಲಿ ಎಲ್ಲಾ ಚರಂಡಿಗಳು ತುಂಬಿ ತುಳುಕುತ್ತಿದ್ದು, ಆರು ತಿಂಗಳಿಂದ ಚರಂಡಿ ಸ್ವಚ್ಚಗೊಳಿಸುವಂತೆ ಒತ್ತಾಯಿಸಿದ್ದರೂ ಪರ್ಯೋಜನವಾಗಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜಪ್ಪ ಅವರು ಪಂಚಾಯಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಫೋನ್ ಸದಾ ಸ್ವಿಚ್ ಆಫ್ ಆಗಿದ್ದು, ಪಂಚಾಯಿತಿಯಲ್ಲಿ ಅರಾಜಕತೆ ನಿರ್ಮಾಣವಾಗಿದೆ ಎಂದು ಆರೋಪಿಸಿ ಬುಧವಾರ ಸಂಜೆ ದಿದ್ದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಗ್ರಾಮಸ್ಥರು ತೆರಳಿ ಕೊಳಚೆಯನ್ನು ಪಿಡಿಓ ಟೇಬಲ್ ಮೇಲೆ ರಾಶಿ ಹಾಕಿದ್ದಾರೆ.ತಾಲ್ಲೂಕಿನಲ್ಲಿ ಈ ಘಟನೆ ಸಂಚಲನಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪರಸ್ಪರ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ.ಗ್ರಾಮದಲ್ಲಿ ಉಮಾ ಮಹೇಶ್ವರಿ ಹಬ್ಬ ನಡೆಯುತ್ತಿದೆ. ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸ್ವಚ್ಛಗೊಳಿಸುವಂತೆ ಹಲವು ಬಾರಿ ಕೇಳಿದರೂ ಪಿಡಿಓ ಸ್ಪಂದಿಸಿಲ್ಲ. ಕೈಗೂ ಸಿಕ್ಕಿಲ್ಲ. 3 ತಿಂಗಳ ಹಿಂದೆ ಜಿಯೋ ಕಂಪನಿಯ ಬ್ರಾಡ್ ಬ್ಯಾಂಡ್ ಕೇಬಲ್ ಅಳವಡಿಕೆ ಕಾರ್ಯಕ್ಕಾಗಿ ಪಂಚಾಯಿತಿಗೆ ಜಿಯೀ ಕಂಪನಿ ರೂ.3.10 ಲಕ್ಷ ತೆರಿಗೆ ಪಾವತಿಸಿದ್ದು, ಪಿಡಿಒ ನಕಲಿ ವೋಚರ್ ತಯಾರಿಸಿ ಈ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಯಾವುದೇ ಚರಂಡಿ ಸ್ವಚ್ಛತೆ, ಬೀದಿ ದೀಪ, ನೀರು, ನೈಮರ್ಮಲ್ಯ ಕಾರ್ಯಕ್ಕೆ ಹಣ ಬಳಸದೆ ಸ್ವಂತಕ್ಕೆ ಬಳಸಿದ್ದಾರೆ. ಈ ಬಗ್ಗೆ ನಾನು ಸಿಇಒ ಅವರಿಗೆ ದೂರು ನೀಡಲಾಗಿದೆ. ಗ್ರಾಮಸ್ಥರೇ ರೊಚ್ಚಿಗೆದ್ದು ಕೊಳಚೆ ಹಾಕಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಡಿ.ಎಸ್.ಪ್ರಶಾಂತ್ ಹೇಳಿದರು.ದಿದ್ದಿಗೆ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೇಳಿದ್ದು, ಅವರು ಸ್ವಚ್ಛಗೊಳಿಸಿ ಪಂಚಾಯಿತಿಯಿಂದ ಹಣ ಪಡೆದಿದ್ದಾರೆ. ಆದರೆ ಕೆಲವರು ಕೆಟ್ಟ ಹೆಸರು ತರುವ ಉದ್ದೇಶದಿಂದ ಕಚೇರಿಯ ಟೇಬಲ್ ಗಳ ಮೇಲೆ ಕೊಳಚೆ ಹಾಕಿರುವುದು ಸರಿಯಲ್ಲ. ಈ ಬಗ್ಗೆ ಸಿಇಒ ಅವರಿಗೆ ದೂರು ನೀಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುತ್ಯಮ್ಮ ಅವರು ತಿಳಿಸಿದರು.