ದಿಟ್ಟ ನಿಲುವಿನ ನಿಜಶರಣ ಅಂಬಿಗರ ಚೌಡಯ್ಯ…..

ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಏಳು ಶತಮಾನಗಳಷ್ಟು ಮೊದಲೇ ಮುನ್ನುಡಿ ಬರೆದವರು ೧೨ನೇ ಶತಮಾನದ ನಮ್ಮ ಶಿವ ಶರಣರು. ಪ್ರಜೆಗಳಿಗೆ ಪರಮಾಧಿಕಾರ, ವ್ಯಕ್ತಿ ಸ್ವಾತಂತ್ರö್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಸರ್ವಸಮಾನತೆಯೆಂಬ ಕನ್ನಡಿ ಹಿಡಿದವರೇ ಈ ಶರಣರು. ತಮ್ಮ ವಚನಗಳ ಮೂಲಕ ಅಂದು ಸಾರಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ.ಕನ್ನಡ ಸಾಹಿತ್ಯಕ್ಕೆ ೧೨ನೇ ಶತಮಾನದ ಶಿವಶರಣರ ಕೊಡುಗೆ ಅಪಾರ. ದಾಸಸಾಹಿತ್ಯ ಮತ್ತು ವಚನಸಾಹಿತ್ಯ ಕನ್ನಡ ಸಾರಸ್ವತದ ಎರಡು ಕಣ್ಣುಗಳು. ವಚನಗಳು ಆಚರ‍್ಯರ ಸಾಹಿತ್ಯವಲ್ಲ, ಅನುಭಾವಿಗಳ ಸಾಹಿತ್ಯ. ಜನರಿಂದ, ಜನರಿಗಾಗಿ ಹುಟ್ಟಿ ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯವಾಗಿದೆ. ಜಾಗತಿಕ ಸಂಸ್ಕೃತಿಗೆ ತನ್ನ ವ್ಯಕ್ತಿತ್ವವನ್ನು ಉದಾತ್ತೀಕರಿಸಿಕೊಂಡ ಯುಗಪುರುಷ, ಮಹಾಚಿಂತಕ ಬಸವಣ್ಣ. ಬಸವಾದಿ ಶರಣರ ಸಮಕಾಲೀನ ತೀಕ್ಷ÷್ಣ ವಿಡಂಬನಾಕಾರ, ನ್ಯಾಯನಿಷ್ಟುರಿ, ನೇರ, ದಿಟ್ಟನಿಲುವಿನ ವ್ಯಕ್ತಿತ್ವವನ್ನು ಹೊಂದಿದ ಸಿಂಹ ಘರ್ಜನೆ ಮೊಳಗಿಸಿದ ನಿಜಶರಣ ಅಂಬಿಗರ ಚೌಡಯ್ಯ.ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಂಗಾಭದ್ರ ನದಿಯ ದಡದಲ್ಲಿರುವ ಶಿವಪುರ (ಚೌಡಯ್ಯದಾನಾಪುರ) ಅಂಬಿಗರ ಚೌಡಯ್ಯನ ಜನ್ಮಸ್ಥಳವಾಗಿದೆ. ಮೂಲ ಹೆಸರು ಚೌಡೇಶ. ತಾಯಿ ಪಂಪಾದೇವಿ, ತಂದೆ ವಿರೂಪಾಕ್ಷ. ನದಿಯ ದಂಡೆಯಲ್ಲಿ ಚೌಡಯ್ಯನ ಗದ್ದುಗೆ ಇದೆ. ಚೌಡದಾನಪುರದಲ್ಲಿ ಪೂರ್ವ ಪಶ್ಚಿಮವಾಹಿನಿಯಾಗಿ ಹರಿಯುತ್ತಿರುವ ತುಂಗಾಭದ್ರಾ ನದಿಯಲ್ಲಿ ದೋಣಿ ಮೂಲಕ ನದಿ ದಾಟಿಸುವ ಕಾಯಕ ಮಾಡುತ್ತಾ ವಚನಗಳನ್ನು ರಚಿಸಿದ್ದಾರೆ. ಗುರುವಿನ ಘನಕೃಪೆಗೆ ಪಾತ್ರರಾಗಿ ಅವರ ಮೂಲಕ ಲಿಂಗಾAಗ ಸಾಮರಸ್ಯವನ್ನರಿತು ಅಪಾರ ಪಾಂಡಿತ್ಯವನ್ನು ಗಳಿಸಿದರು. ಕಲ್ಯಾಣದ ಕೀರ್ತಿಯನ್ನು ಕೇಳಿ ಅನುಭವ ಮಂಟಪಕ್ಕೆ ಬಂದ ಈ ಶರಣ ದಂಪತಿಗಳನ್ನು ಶರಣ ಪ್ರಮಥರೆಲ್ಲ ಆದರದಿಂದ ಬರಮಾಡಿಕೊಂಡರAತೆ. ಅಲ್ಲಿನ ಬಸವ ಪ್ರಭೆಯನ್ನು ಕಂಡು ಆನಂದಪರವಶರಾಗಿ ಚೌಡಯ್ಯನವರು ಭಕ್ತಿಯಿಂದ ಕೈ ಮುಗಿದರು.ಇವರ ಕಾಲ ಕ್ರಿ.ಶ.ಸುಮಾರು ೧೧೬೦ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸಂಘದ ವಿನಂತಿಯ ಮೇರೆಗೆ ಜನವರಿ ೨೧ ನಿಜಶರಣ ಅಂಬಿಗರ ಚೌಡಯ್ಯನ ಜಯಂತೋತ್ಸವವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವುದು ಹೆಮ್ಮೆಯ ಸಂಗತಿಯಾಗಿದೆ.ಅನುಭವ ಮಂಟಪದಲ್ಲಿ ಚೆನ್ನಬಸವಣ್ಣನವರಿಂದ ಅರಿವಿನ ದಾರಿ ತಿಳಿದು, ನಡೆದವರಿಗೆ ಬಾಗಿ, ಮೀರಿನಡೆದವರನ್ನು ಖಂಡಿಸುತ್ತಾ, ದಾಂಭಿಕರ ವೈರಿಯಾಗಿ ನಡೆದವ ಅಂಬಿಗರ ಚೌಡಯ್ಯ. ಅಧರಕ್ಕೆ ಕಹಿಯಾದರೂ, ಉದರಕ್ಕೆ ಸಿಹಿಯಾದ ವಚನಗಳನ್ನು ರಚಿಸಿದ್ದಾನೆ. ಗ್ರಾಮೀಣ ಜನತೆಗೆ ಇವನ ವಚನಗಳೆಂದರೆ ಪಂಚಪ್ರಾಣ. ವಚನಗಳಲ್ಲಿ ಅಂತರAಗದ ಸರಳತೆ, ನ್ಯಾಯ ನಿಷ್ಠುರತೆ, ಒರಟುತನ ಪ್ರತಿಬಿಂಬಿಸಿದೆ. ಸರಳ ಭಾಷೆಯಲ್ಲಿದ್ದರೂ ಚಾಟಿಯೇಟನ್ನು ಕೊಡುವಂತಿವೆ. ಜೀವನ ಕೇವಲ ವೀಣೆ-ವೇಣುಗಳಿಂದಲೇ ಸಾಗುವುದಿಲ್ಲ ಆಗಾಗ ನಗಾರಿ ಭೇರಿಗಳು ಬೇಕಾಗುತ್ತವೆ ಎಂಬ ಧ್ವನಿಯನ್ನು ಈತನ ವಚನಗಳಲ್ಲಿ ಕಾಣಬಹುದು. ಜಗತ್ತಿನ ಅಣು-ರೇಣು-ತೃಣಗಳಲ್ಲಿ ಶಿವನಿದ್ದಾನೆ. ಅವನ ಚಿಂತನೆಯಲ್ಲಿ ಮುಳುಗಿದವರು ವಿರಳವೆಂದಿದ್ದಾನೆ. ಈತ ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟು ಹಾಕು ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯವುಳ್ಳ ಅಂಬಿಗನಾಗಿದ್ದಾನೆ. ಹಳೆಚಿiÀÄ ಮತ್ತು ಹೊಸ ನಂಬಿಕೆಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ವೀರಶೈವ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯನ ಈ ವಚನಗಳು ಬಹುಶಃ ಸಾಮಾಜಿಕ ಅವಶ್ಯಕತೆಯ ಪರಿಣಾಮಗಳೆಂದು ಭಾವಿಸಬಹುದಾಗಿದೆ.