ದಿಗ್ಗಜ ಶ್ರೀಗಳ ಆದರ್ಶದಿಂದ ತಾರತಮ್ಯ ದೂರ


ಬ್ಯಾಡಗಿ,ಮಾ.4: ದಿಗ್ಗಜ ಶ್ರೀಗಳು ಜಾತಿ,ಮತಗಳನ್ನು ಮೀರಿ ಮಾನವ ಕುಲವನ್ನು ರಕ್ಷಿಸಿ ಬೆಳೆಸುವಲ್ಲಿ ಪ್ರಮುಖರಾಗಿದ್ದು, ಇಂತಹ ಶ್ರೀಗಳ ಆದರ್ಶಗಳನ್ನು ಎಲ್ಲ ಮಠಗಳು ಅನುಸರಿಸಿದರೆ ಮನುಕುಲದಲ್ಲಿನ ತಾರತಮ್ಯಗಳು ದೂರವಾಗಬಹುದಾಗಿದೆ ಎಂದು ಸಿಪಿಐ ಬಸವರಾಜ ಪಿ.ಸಿ. ಹೇಳಿದರು.
ಪಟ್ಟಣದ ಗಾನಯೋಗಿ ಕಲಾ ತಂಡದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಡಾ.ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹದಿಂದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶ್ರಯವಾಗಿದ್ದರು. ಡಾ.ಪುಟ್ಟರಾಜ ಗವಾಯಿಗಳು ಅಂಧರ ಬಾಳಿನ ಆಶಾಕಿರಣವಾಗಿದ್ದರು. ನಾಡು ನುಡಿಗಾಗಿ ಜೀವನದುದ್ದಕ್ಕೂ ಶ್ರಮಿಸಿದ ಇವರೆಲ್ಲ ಗವಿಮಠದ ಲಿಂ.ಬಸವಲಿಂಗ ಸ್ವಾಮಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಮಾತನಾಡಿ, ಡಾ.ಪುಟ್ಟರಾಜ ಗವಾಯಿಗಳು ಸ್ವತಃ ಅಂಧರಾಗಿದ್ದರೂ ಸಮಾಜಕ್ಕೆ ಸಾಹಿತ್ಯ ಹಾಗೂ ಸಂಗೀತದ ಬೆಳಕು ತೋರಿದ ಮಹಾತ್ಮರಾಗಿದ್ದಾರೆ. ಗದುಗಿನ ಆಶ್ರಮದಲ್ಲಿ ಸಾವಿರಾರು ಅಂಧರಿಗೆ ಆಶ್ರಯ ಕಲ್ಪಿಸಿ ಸಂಗೀತ ವಿದ್ಯೆಯನ್ನು ಧಾರೆ ಎರೆದು ಎಲ್ಲರಂತೆ ಜೀವನ ನಡೆಸಲು ದಾರಿದೀಪವಾಗಿದ್ದಾರೆ. ಅದರಂತೆ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರು ಸಾವಿರಾರು ಮಕ್ಕಳಿಗೆ ವಿದ್ಯಾದಾನ, ನಿತ್ಯದಾಸೋಹದ ಮೂಲಕ ಜನಮಾನಸದಲ್ಲಿ ಅವಿಸ್ಮರಣೀಯವಾಗಿದ್ದಾರೆ. ಬಡಮಕ್ಕಳ ಭವಿಷ್ಯವನ್ನು ಬೆಳಗಿಸುವಲ್ಲಿ ಅವರ ಪಾತ್ರ ಹಿರಿದಾಗಿದ್ದು ಶ್ರೀಗಳ ಜೀವನ ಇಂದಿನ ಸಮಾಜಕ್ಕೆ ಆದರ್ಶವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾನಯೋಗಿ ಕಲಾತಂಡದ ಅಧ್ಯಕ್ಷ ವೀರಭದ್ರಪ್ಪ ಹೊಮ್ಮರಡಿ ಮಾತನಾಡಿ, ಪ್ರತಿಯೊಬ್ಬ ಕಲಾವಿದರಿಗೂ ಶ್ರೀಗಳು ಅದರ್ಶವಾಗಿದ್ದು, ನಮ್ಮೆಲ್ಲರ ಕಲಾ ಸೇವೆಗೆ ಅವರು ಪ್ರೇರಣೆಯಾಗಿದ್ದಾರೆ ಎಂದರಲ್ಲದೇ, ಕಳೆದ ವರ್ಷ ಕೋವಿಡ್ ಮಹಾಮಾರಿಯಿಂದ ಕಲಾವಿದರ ಬದುಕು ಬಹಳ ಸಂಕಷ್ಟವನ್ನು ಅನುಭವಿಸಿತ್ತು. ಈ ಬಾರಿ ಮತ್ತೆ ಎರಡನೇ ಹಂತದಲ್ಲಿ ಕೋವಿಡ್ ಹರಡುವ ಹಂತದಲ್ಲಿದ್ದು, ಕಲಾವಿದರು ಅತಂತ್ರ ಸ್ಥಿತಿಯಲ್ಲಿ ಸಿಲುಕುವಂತಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಕಲಾವಿದರ ನೆರವಿಗೆ ಮುಂದಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಸಣಗಿ ಗ್ರಾಪಂ.ಅಧ್ಯಕ್ಷ ಮಲ್ಲೇಶಪ್ಪ ಬಣಕಾರ, ಮಾಲತೇಶ ದೇವಗಿರಿ, ಮಂಜು ಮುಂಡರಗಿ, ಮಾರುತಿ ಮೋಟೆಬೆನ್ನೂರು, ನಾಗರಾಜ ರಾಮಣ್ಣನವರ, ಮಲ್ಲಿಕಾರ್ಜುನ ಹೊಸಳ್ಳಿ, ಪ್ರಶಾಂತ ಯಾದವಾಡ, ಹನುಮಂತಪ್ಪ ಬೆಳವಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.