ದಿಗ್ಗಜ ರನ್ನರ್ ಜಿಮ್ ಹೈನ್ಸ್ ನಿಧನ

ನ್ಯೂಯಾರ್ಕ್, ಜೂ.೬- ೧೦೦ ಮೀ. ಓಟದ ಸ್ಪರ್ಧೆಯನ್ನು ಕೇವಲ ೧೦ ಸೆಕೆಂಡ್‌ಗಳೊಳಗೆ ಮುಗಿಸಿದ ಜಾಗತಿಕ ಮಟ್ಟದ ಮೊದಲ ರನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಮೆರಿಕಾದ ಜಿಮ್ ಹೈನ್ಸ್ ಅವರು ನಿಧನರಾಗಿದ್ದಾರೆ. ಅವರಿಗೆ ೭೬ ವರ್ಷ ವಯಸ್ಸಾಗಿತ್ತು.
೧೯೬೮ರ ಯುಎಸ್ ಚಾಂಪಿಯನ್‌ಶಿಪ್‌ನಲ್ಲಿ ಹೈನ್ಸ್ ಅವರು ೧೦೦ ಮೀ. ಓಟದ ಸ್ಪರ್ಧೆಯನ್ನು ಕೇವಲ ೯.೯ ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ಇಡೀ ವಿಶ್ವವೇ ತನ್ನತ್ತ ನೋಡುವಂತೆ ಮಾಡಿದ್ದರು. ಅದೂ ಅಲ್ಲದೆ ೧೦೦ ಮೀ. ಸ್ಪರ್ಧೆಯನ್ನು ೧೦ ಸೆಕೆಂಡ್‌ಗಳ ಒಳಗೆ ಮುಗಿಸಿದ ಮೊದಲ ರನ್ನರ್ ಎಂಬ ಕೀರ್ತಿಗೆ ಅವರು ಆ ಅವಧಿಯಲ್ಲಿ ಪಾತ್ರರಾಗಿದ್ದರು. ಅಲ್ಲದೆ ಅದೇ ವರ್ಷ ಮೆಕ್ಸಿಕೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕೂಡ ೧೦೦ ಮೀ. ಓಟದ ಸ್ಪರ್ಧೆಯನ್ನು ೯.೯೫ ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ಹೈನ್ಸ್ ತನ್ನ ದಾಖಲೆಯನ್ನೇ ಮುರಿದುಕೊಂಡು, ಮತ್ತೆ ಮುನ್ನೆಲೆಗೆ ಬಂದಿದ್ದರು. ಹೀಗೆ ಹೈನ್ಸ್ ಸಾಧಿಸಿದ ದಾಖಲೆ ಸುಮಾರು ೧೫ ವರ್ಷಗಳ ವರೆಗೆ ಯಾರಿಗೂ ಮುರಿಯಲು ಸಾಧ್ಯವಾಗಿರಲಿಲ್ಲ. ಈ ಮೂಲಕ ಇದೊಂದು ೧೧೦ ವರ್ಷಗಳ ಹಿಂದೆ ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೌಂಡೇಶನ್ ಟ್ರ್ಯಾಕ್ ಸಮಯ ಪ್ರಾರಂಭಿಸಿದ ನಂತರ ಅಥ್ಲೀಟ್ ಒಬ್ಬ ಪುರುಷರ ೧೦೦ ಮೀ ಓಟದ ದಾಖಲೆಯನ್ನು ಹೊಂದಿರುವ ಸುದೀರ್ಘ ಅವಧಿಯಾಗಿತ್ತು. ಆದರೆ ೧೯೮೩ರಲ್ಲಿ ಕಾಲ್ವಿನ್ ಸ್ಮಿತ್ ಅವರು ಹೈನ್ಸ್ ಸಾಧಿಸಿದ ದಾಖಲೆಯನ್ನು ಮುರಿದಿದ್ದರು. ಸ್ಮಿತ್ ಅವರು ಕೇವಲ ೯.೯೩ ಸೆಕೆಂಡ್‌ಗಳಲ್ಲಿ ೧೦೦ ಮೀ. ಓಟದ ಸ್ಪರ್ಧೆಯನ್ನು ಮುಗಿಸುವ ಮೂಲಕ ಹೈನ್ಸ್ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದರು. ಇದರ ಹೊರತಾಗಿಯೂ ೧೦೦ ಮೀ. ಓಟದ ಸ್ಪರ್ಧೆಯನ್ನು ೧೦ ಸೆಕೆಂಡ್‌ಗಳ ಒಳಗೆ ಮುಗಿಸಿದ ಮೊದಲ ರನ್ನರ್ ಎಂಬ ಹೆಗ್ಗಲಿಕೆ ಮಾತ್ರ ಹೈನ್ಸ್ ಹೆಸರಲ್ಲಿದೆ. ಇನ್ನು ಹೈನ್ಸ್ ಸಾವಿನ ಸುದ್ದಿಯನ್ನು ವಿಶ್ವ ಅಥ್ಲೆಟಿಕ್ಸ್ ಅಧಿಕೃತವಾಗಿ ಬಹಿರಂಗಪಡಿಸಿದೆ. ೧೯೪೬ರಲ್ಲಿ ಅರ್ಕಾನ್ಸಾಸ್ ರಾಜ್ಯದಲ್ಲಿ ಹೈನ್ಸ್ ಜನಿಸಿದ್ದರೂ ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ನಲ್ಲಿ ಬೆಳೆದರು. ಹೈನ್ಸ್ ಅವರು ಟೆಕ್ಸಾಸ್ ಸದರ್ನ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅವರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಮತ್ತು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಮೊದಲು ಟೈಗರ್ಸ್ ಟ್ರ್ಯಾಕ್ ತಂಡಕ್ಕಾಗಿ ಓಡಿದರು. ಇನ್ನು ಹೈನ್ಸ್ ಸಾವಿಗೆ ಒಲಿಂಪಿಕ್ಸ್ ಸಮಿತಿ, ಅಮೆರಿಕಾದ ಟ್ರ್ಯಾಕ್ ಹಾಗೂ ಫೀಲ್ಡ್ ಅಸೋಸಿಯೇಶನ್ ಕೂಡ ಕಂಬನಿ ಮಿಡಿದಿದೆ.