ದಿಗ್ಗಜರಿಂದ ಮತ ಶಿಕಾರಿ

ಬೆಂಗಳೂರು,ಏ.೨೬:ರಾಜ್ಯ ವಿಧಾನಸಭೆಯ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಘಟಾನುಘಟಿ ನಾಯಕರುಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್, ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್, ಕೇಂದ್ರ ಸಚಿವರಾದ ರಾಜನಾಥ್‌ಸಿಂಗ್, ನಿರ್ಮಲಾ ಸೀತಾರಾiನ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಸೇರಿದಂತೆ ಪ್ರಮುಖ ನಾಯಕರುಗಳು ಅಬ್ಬರದ ಪ್ರಚಾರ ನಡೆಸಿದ್ದಾರೆ.
ರಾಜ್ಯಕ್ಕೆ ಘಟಾನುಘಟಿ ನಾಯಕರುಗಳು ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿ, ರಾಜ್ಯದ ವಿವಿಧೆಡೆ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಬಿರುಬಿಸಿಲನ್ನೂ ಲೆಕ್ಕಿಸದೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ಪ್ರಚಾರದ ಕಾವು ತೀವ್ರತೆ ಪಡೆದುಕೊಂಡಿದೆ.
ವಿಧಾನಸಭಾ ಚುನಾವಣೆಗೆ ಇನ್ನು ೧೪ ದಿನ ಬಾಕಿ ಉಳಿದಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪ್ರಚಾರವನ್ನು ಬಿರುಸುಗೊಳಿಸಿದ್ದು, ಈ ಪಕ್ಷಗಳ ಎಲ್ಲ ನಾಯಕರುಗಳು ವಿವಿಧೆಡೆ ಪ್ರಚಾರದಲ್ಲಿ ತೊಡಗಿದ್ದಾರೆ.
ಯೋಗಿ ಪ್ರಚಾರ ಇಂದು ಯೋಗಿ, ೨೯ಕ್ಕೆ ಮೋದಿ
ಆಡಳಿತಾರೂಢ ಬಿಜೆಪಿ ಪ್ರಚಾರದ ವೇಗವನ್ನು ತೀವ್ರಗೊಳಿಸಿದ್ದು, ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಮಂಡ್ಯದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು, ಸಂಜೆ ಅವರು ಬಸವನ ಬಾಗೇವಾಡಿ ಮತ್ತು ಇಂಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು.
ಯೋಗಿ ಆದಿತ್ಯನಾಥ್ ಮತ್ತೆ ಏ. ೩೦ ರಂದು ರಾಜ್ಯಕ್ಕೆ ಆಗಮಿಸಿ, ಪುತ್ತೂರು, ಕಾರ್ಕಳ ಮತ್ತು ಭಟ್ಕಳದಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವರು. ಹಾಗೆಯೇ, ಮೇ ೩ ರಂದು ಮತ್ತೆ ರಾಜ್ಯಕ್ಕೆ ಆಗಮಿಸುವ ಯೋಗಿಆದಿತ್ಯನಾಥ್, ಗಂಗಾವತಿ, ಜೇವರ್ಗಿ, ಶಹಾಪುರ ಮತ್ತು ಭಾಲ್ಕಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಖರ್ಗೆ ಇಂದು ಚಿಕ್ಕೋಡಿಯ ಸದಲಗದಲ್ಲಿ ಪ್ರಚಾರನಿರತವಾಗಿದ್ದು, ಸಂಜೆ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪರ ಮತ ಕೇಳುವರು.ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್ ಪರ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ತಮ್ಮ ಅಜ್ಜಿ ದಿವಂಗತ ಪ್ರಧಾನಿ ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್‌ಜನ್ಮ ನೀಡಿದ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದರು.
ಮೈಸೂರಿನಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೇವಾಲಾ ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರದಲ್ಲಿ ಮತಬೇಟೆ ನಡೆಸಿದ್ದಾರೆ.
೨೯ಕ್ಕೆ ಮೋದಿ
ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಏ. ೨೯, ೩೦, ಮೇ ೨, ಮೇ ೩, ಮೇ ೬ ಮತ್ತು ಮೇ ೭ ಒಟ್ಟು ೬ ದಿನ ರಾಜ್ಯದ ವಿವಿಧೆಡೆ ೧೫ಕ್ಕೂ ಹೆಚ್ಚು ರ್‍ಯಾಲಿ ಹಾಗೂ ರೋಡ್ ಶೋಗಳಲ್ಲಿ ಭಾಗಿಯಾಗುವರು.
ನಾಳೆ ರಾಹುಲ್
ರಾಹುಲ್‌ಗಾಂಧಿ ನಾಳೆ ರಾಜ್ಯಕ್ಕೆ ಆಗಮಿಸಿ ಏ. ೨೭ ಮತ್ತು ೨೮ ಎರಡೂ ದಿನ ಕರಾವಳಿ ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮೀನುಗಾರರ ಜತೆ ಸಭೆ ನಡೆಸುವರು. ಹಾಗೆಯೇ, ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೂ ತೆರಳಿ ದೇವಿಯ ದರ್ಶನ ಪಡೆಯುವರು.
ಕೇಂದ್ರ ಸಚಿವರಾದ ರಾಜನಾಥ್‌ಸಿಂಗ್, ಬೆಳಗಾವಿಯ ಕಾಗವಾಡ ಹಾಗೂ ವಿಜಾಪುರದ ಜಮಖಂಡಿಯಲ್ಲಿ ಇಂದು ಪ್ರಚಾರ ನಡೆಸಿದ್ದು, ಕೇಂದ್ರ ವಿತ್ತ ಸಚಿವೆ. ನಿರ್ಮಲಾ ಸೀತಾರಾಮನ್ ಕಲಬುರಗಿ ನಗರ ಮತ್ತು ಅಳಂದಾದಲ್ಲಿ ಬಿಜೆಪಿಯ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಿ ಮತಬೇಟೆ ನಡೆಸಿದರು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಿಜಾಪುರದ ಬಬಲೇಶ್ವರದಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾದರು.

ಯೋಗಿ ರೋಡ್ ಶೋ

ಸಕ್ಕರೆ ನಾಡು ಮಂಡ್ಯದಲ್ಲಿಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಬಿಜೆಪಿ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ರೋಡ್ ಶೋ ನಡೆಸಿದರು.ಮಧ್ಯಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಜತೆ ಸಂಸದೆ ಸುಮಲತಾ ಅಂಬರೀಷ್, ಸಚಿವರಾದ ಡಾ. ಕೆ.ಸಿ. ನಾರಾಯಣಗೌಡ, ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ, ಮೈಸೂರಿನ ಸಂಸದ ಪ್ರತಾಪ್‌ಸಿಂಹ ಸೇರಿದಂತೆ ಹಲವು ನಾಯಕರು ರೋಡ್ ಶೋನಲ್ಲಿ ಭಾಗಿಯಾದರು.
ಮಂಡ್ಯದಲ್ಲಿಂದು ರೋಡ್ ಶೋ ನಡೆಸಿದ ಯೋಗಿಆದಿತ್ಯನಾಥ್‌ರವರಿಗೆ ಜನ ಅದ್ಧೂರಿ ಸ್ವಾಗತ ಕೋರಿದ್ದು, ಅವರು ಹೋದೆಡೆಯಲ್ಲೆಲ್ಲ ಜನ ಅವರತ್ತ ಕೈ ಬೀಸಿ ಹರ್ಷೋದ್ಗಾರ ಮಾಡಿದರು.

ಸುದೀಪ್ ಅಬ್ಬರದ ಪ್ರಚಾರ
ಬಿಜೆಪಿ ಪರ ಪ್ರಚಾರ ನಡೆಸಿರುವ ನಟ ಸುದೀಪ್, ಇಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಪರ ಮತಯಾಚಿಸಿದರು. ನಂತರ ನಟ ಸುದೀಪ್ ಅವರು ಮಾಯಕೊಂಡ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಸಂಜೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋಗಳಲ್ಲಿ ಪಾಲ್ಗೊಂಡು ಸಂಡೂರಿನಲ್ಲೂ ರೋಡ್ ಶೋ ಮೂಲಕ ಮತಯಾಚಿಸಿದರು.