ಬೀದರ್:ಮಾ.30: ದಾಸಿಮಯ್ಯ ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಶರಣಜೀವನ ನಡೆಸಲು ಪ್ರೇರಣೆ ನೀಡುತ್ತವೆ. ದಾಸಿಮಯ್ಯ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಇಲ್ಲಿ ಕರೆ ನೀಡಿದರು.
ನಗರದ ದೇವರ ದಾಸಿಮಯ್ಯ ನೇಕಾರ ಸಮಾಜ ಸಂಘವು ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ದೇವರ ದಾಸಿಮಯ್ಯ ಆದ್ಯ ವಚನಕಾರರು. ಕಾಯಕ ಜೀವಿ, ವಚನ ಯುವ ಪ್ರವರ್ತಕ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಬಣ್ಣಿಸಿದರು.
ದೇವರ ದಾಸಿಮಯ್ಯನವರ ಕಾಲ 1040 ರಿಂದ 1100 ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ದಾಸಿಮಯ್ಯ ಅವರ 176 ವಚನಗಳು ಲಭಿಸಿವೆ. ಇಳೆನಿಮ್ಮ ದಾನ, ಬೆಳೆ ನಿಮ್ಮ ದಾನ ಎನ್ನುವುದು ದಾಸಿಮಯ್ಯ ಅವರ ಪ್ರಸಿದ್ಧ ವಚನ ಎಂದು ಹೇಳಿದರು.
ಶಿವನಿಚ್ಛೆಯಂತೆ ಬಾಳುವುದೇ ಶರಣರ ಜೀವನ. ಯಾವುದರ ಬಗ್ಗೆಯೂ ಗೊಣಗಾಟ ಇಲ್ಲ. ಅನ್ಯರ ಹಂಗಿಲ್ಲ. ಸಂಸಾರದೊಳಗೆ ಇದ್ದುಕೊಂಡೇ ಆಸೆಯನ್ನು ಜಯಸುವುದು ಶರಣರ ಬಾಳು ಎಂದು ಸೂರ್ಯಕಾಂತ್ ಹೇಳಿದರು.
ಸಮಾರಂಭದಲ್ಲಿ ಪೂಜ್ಯ ಜಗದ್ಗುರು ಯೋಗೇಶ್ವರ ಸ್ವಾಮೀಜಿ, ಸೋಮಶೇಖರ ಅಮಲಾಪುರೆ, ಪ್ರಶಾಂತ ಶೇದ್ರೆ, ರಾಚಪ್ಪ, ಶರಣಪ್ಪ, ನಾಗಪ್ಪ, ರಾಜಶೇಖರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.