ದಾಸಾಪುರ ಗ್ರಾಮದಲ್ಲಿ  ನಾಟಕ ಪ್ರದರ್ಶನ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ.30. ಸಮೀಪದ ದಾಸಾಪುರ ಗ್ರಾಮದ ಅಗಸೆ ಮುಂಬಾಗದಲ್ಲಿ, ಮಾ.27 ರಂದು ಸೋಮವಾರ ಧಾತ್ರಿ ರಂಗಸಂಸ್ಥೆ ತಿರುಗಾಟ ತಂಡದವರಿಂದ ‘ಸೀತಾಪಹರಣ’ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಕೇಂದ್ರೀಯ ಸಾಂಸ್ಕೃತಿಕ ಸಚಿವಾಲಯ ಮತ್ತು ಧಾತ್ರಿ ರಂಗಸಂಸ್ಥೆ ಸಿರಿಗೇರಿ ಇವರ ಸಹಯೋಗದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ ಅಂಗವಾಗಿ ನಾಟಕ ಪ್ರದರ್ಶಿಸಲಾಯಿತು. ಪ್ರಾರಂಭದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು, ಹಿರಿಯ ಬಯಲಾಟ ಕಲಾವಿದರಿಂದ ಮೃದಂಗ ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ದಾಸಾಪುರದ ಕೆಲ ಕಲಾವಿದರು, ಮುಖಂಡರು ಮಾತನಾಡಿ ಬಯಲಾಟ, ರಂಗಭೂಮಿಯ ನಾಟಕಗಳು ಕಲೆಯ ಗಟ್ಟಿತನದ ಜೀವಾಳವಾಗಿವೆ. ಜನರ ಮುಂದೆ ಪ್ರತ್ಯಕ್ಷವಾಗಿ ತಪ್ಪುಒಪ್ಪುಗಳನ್ನು ಅರಿತುಕೊಂಡು ಉತ್ತಮ ಕಾಲಕೌಶಲ್ಯವನ್ನು ಪ್ರದರ್ಶಿಸಿ ಉತ್ತಮ ನಟರಾಗುವುದಕ್ಕೆ ಉತ್ತಮ ವೇದಿಕೆಗಳಾಗಿವೆ. ಈಗಿನ ಯುವಕರು ಬಯಲಾಟ, ನಾಟಕಗಳ ಕೌಶಲ್ಯಗಳನ್ನು ಆಧುನಿಕ ರೀತಿಯಲ್ಲಿ ಹೆಚ್ಚು ಜನರು ಇತ್ತಕಡೆ ಲಕ್ಷ್ಯ ಕೊಡುವಂತೆ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿಯಲಿ ಎಂದು ಯುವ ಕಲಾವಿದರನ್ನು ಹಾರೈಸಿದರು. ನಂತರ ಧಾತ್ರಿ ರಂಗಸಂಸ್ಥೆಯ ತಿರುಗಾಟ ತಂಡದ ಕಲಾವಿದರಿಂದ ಸೀತಾಪಹರಣ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮನರಂಜಿಸಿದರು.