ದಾಸಾಪುರ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಕ್ಷಯರೋಗ ಜಾಗೃತಿ ಜಾಥಾ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜು 23. ಸಿರಿಗೇರಿ ಸಮೀಪದ ದಾಸಾಪುರ ಗ್ರಾಮದಲ್ಲಿ ಜು.20ರಂದು ಆರೋಗ್ಯ ಇಲಾಖೆ ನೇತೃತ್ವದಲ್ಲಿ ಕ್ಷಯರೋಗ ಜಾಗೃತಿ ಜಾಥಾ ನಡೆಸಲಾಯಿತು. ಕ್ಷಯರೋಗವನ್ನು ಸೋಲಿಸಿ ದೇಶವನ್ನು ಗೆಲ್ಲಿಸಿ ಎಂಬ ಶೀರ್ಷಿಕೆಯಡಿಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷಯರೋಗವನ್ನು ಹತ್ತಿಕ್ಕುವ ಮತ್ತು ಮುಕ್ತಗೊಳಿಸುವಂತೆ ಶಾಲಾ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿದರು. ಇದೇವೇಳೆ ಗ್ರಾಮದ ಜನರನ್ನುದ್ದೇಶಿಸಿ ಸಮುದಾಯ ಆರೋಗ್ಯ ಅಧಿಕಾರಿ ನಾಗೇಶ್ ಮಾತನಾಡಿ ಅತಿಯಾದ ಕೆಮ್ಮು, ರಾತ್ರಿ ಹೊತ್ತು ಜ್ವರ ಇತರೆ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಕಫ ಪರೀಕ್ಷೆ ಮಾಡಿಸಿಕೊಂಡು ಪ್ರಾರಂಭದಲ್ಲಿಯೇ ಚಿಕಿತ್ಸೆ ತೆಗೆದುಕೊಂಡರೆ ಈ ರೋಗವು ಹೆಚ್ಚು ಜನರಿಗೆ ಹರಡುವುದು ತಪ್ಪುತ್ತದೆ. ಅರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಗಂಬೀರವಾಗಿ ಪರಿಗಣಿಸಿ ಕ್ಷಯ (ಟಿಬಿ) ರೋಗದಿಂದ ಜಾಗೃತಗೊಂಡು ರೋಗದ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಕೋರಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಇದೇವೇಳೆ ಜನರಿಗೆ ಮಾಹಿತಿ ನೀಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗಕ್ಕೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ನಮ್ಮ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳಬೇಕು, ಮತ್ತು ಈ ರೋಗವು ಗ್ರಾಮದಲ್ಲಿ ಯಾರಿಗಾದರೂ ಇದ್ದದ್ದು ಸಂಶಯವಿದ್ದಲ್ಲಿ ಆಶಾಕಾರ್ಯಕರ್ತರಿಗೆ, ನಮಗೆ ತಿಳಿಸಿದರೆ ಅವರ ಮನೆಗಳಿಗೆ ಭೇಟಿನೀಡಿ ಸೂಕ್ತ ಚಿಕಿತ್ಸೆ ನೀಡಲಾಗುವುದೆಂದು ತಿಳಿಸಿದರು. ಶಾಲೆಯ ಮುಖ್ಯಗುರುಗಳು, ಸಹಶಿಕ್ಷಕರು, ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ವೀರೇಶ್, ಆಶಾಸುಗುಮಕಾರಿ ಮಹಾಲಕ್ಷ್ಮಿ, ಸುನಿತಾ, ಜಾಥಾದಲ್ಲಿ ಪಾಲ್ಗೊಂಡಿದ್ದರು.