ದಾಸವಾಳದ ಉಪಯೋಗಗಳು

ಮೂಲತಃ ಚೈನಾದೇಶದ ಈ ಹೂ ಎಲ್ಲರ ಮನೆಯಂಗಳದ ಅಲಂಕಾರಿಕಾ ಹೂ. ಆದರೆ ಮನುಷ್ಯ ಎಷ್ಟು ಬುದ್ಧಿವಂತ, ದಾಸವಾಳದಲ್ಲಿ ಇರುವಂತಹ ಅನೇಕ ಔಷಧೀಯ ಗುಣಗಳನ್ನು ಕಂಡುಹಿಡಿದು, ಅದರ ಸಂಪೂರ್ಣ ಪ್ರಯೋಜನವನ್ನು ಅನಾದಿಕಾಲದಿಂದಲೂ ಬಳಸುತ್ತಾ ಬಂದಿದ್ದಾನೆ.
ಸಂಸ್ಕೃತದಲ್ಲಿ “ಜಪಾಪುಷ್ಪ” ಎಂದು ಕರೆಯಲ್ಪಡುತ್ತದೆ. ಈ ಹೂ ಶಿವನಿಗೆ ಪ್ರಿಯ. ಅರಳಿದ ನಂತರ ಧ್ಯಾನಮಗ್ನನಾದ ಶಿವನಂತೆ ಕಾಣುತ್ತದೆ. ಎಂಬ ಕಾರಣಕ್ಕಾಗಿ ಇದನ್ನು ಜಪಾಕುಸುಮ ಎಂತಲೂ ಕರೆಯುತ್ತಾರೆ.
ಈ ಹೂವು ಹೆಂಗಸರ ಸ್ನೇಹಿ ಅಂತಾನೇ ಕರೆಯಬಹುದು. ಇದು ಹೆಂಗಸರ ಸೌಂಧರ್ಯಕ್ಕೂ, ಆರೋಗ್ಯಕ್ಕೂ ಕೂದಲು ಸಂರಕ್ಷಣೆಗೂ ಅತ್ಯಂತ ಸಹಕಾರಿ. ದಾಸವಾಳ ಹೂ ಆಹಾರದಲ್ಲಿ, ಕೂದಲು ಡೈ ಮಾಡುವುದಕ್ಕೆ, ಕೇಶಸಂರಕ್ಷಣೆಗೆ, ಹೆಣ್ಣುಮಕ್ಕಳ ಋತುಚಕ್ರದ ಸಮಸ್ಯೆಗಳಿಗೆ, ಜಾನುವಾರುಗಳ ಆರೋಗ್ಯದ ಸಮಸ್ಯೆಗೆ ಹೀಗೆ ನಾನಾ ರೂಪದಲ್ಲಿ ಬಳಸಲಾಗುತ್ತದೆ.
ಸಾರಜನಕ, ಸುಣ್ಣ, ರಂಜಕ, ಕಬ್ಬಿಣ ಬಿ ಮತ್ತು ಸಿ ಜೀವಸತ್ವ ಗಳಂತಹ ಪೋಷಕಾಂಶಗಳನ್ನು ಹೊಂದಿದೆ.
೧. ಕೂದಲು ಸಂರಕ್ಷಣೆ: ದಾಸವಾಳದ ಗಿಡದ ಎಲೆಯನ್ನು ತಂದು ನುಣ್ಣಗೆ ರುಬ್ಬಿಕೊಳ್ಳಿ ಆ ಕಲ್ಕವನ್ನು ತಲೆಯ ಬುಡದ ಭಾಗಕ್ಕೆ ಚೆನ್ನಾಗಿ ಹಚ್ಚಿ, ಅರ್ಧ ಗಂಟೆಯ ನಂತರ ತಲೆಯನ್ನು ಸ್ವಚ್ಛ ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. ಅಕಾಲಿಕ ನೆರೆ ಯುವುದು ಅಂದರೆ ಬೆಳ್ಳಗಾಗುವುದನ್ನು ತಪ್ಪಿಸುತ್ತದೆ.
೨. ಚರ್ಮದ ಸಂರಕ್ಷಣೆ: ಕೇವಲ ಕೂದಲಿನ ಸಂರಕ್ಷಣೆಯಷ್ಟೇ ಅಲ್ಲ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ದಾಸವಾಳದಿಂದ ಎಣ್ಣೆಯನ್ನು ತೆಗೆಯುತ್ತಾರೆ. ಈ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ, ಗುಳ್ಳೆಗಳು, ಕಲೆಗಳು ಹೋಗುತ್ತವೆ. ಜೊತೆಗೆ ಮುಖದ ಕಾಂತಿಯನ್ನು ಉತ್ತiಗೊಳಿಸುತ್ತದೆ. ಮಕ್ಕಳಿಗೆ ಇದನ್ನು ಹಚ್ಚುವುದರಿಂದ ಮುಂದೆ ಚರ್ಮದ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುತ್ತದೆ. ಇದನ್ನು ಸ್ತ್ರೀಯರ ಸಮಸ್ಯೆಗಳಿಗೂ ಬಳಸಬಹುದಾಗಿದೆ.
೩. ಅನಿಯಮಿತ ಋತುಚಕ್ರ: ಪ್ರತಿ ತಿಂಗಳು ಋತುಚಕ್ರ ಸರಿಯಾಗಿ ಆಗದಿರುವ ಹೆಣ್ಣುಮಕ್ಕಳು ದಾಸವಾಳದ ೩-೪ ಹೂಗಳನ್ನು ಪ್ರತಿದಿನ ನುಣ್ಣಗೆ ಅರೆದು, ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸಬೇಕು. ೭ ದಿನಗಳ ಕಾಲ ಸತತವಾಗಿ ಸೇವಿಸಿದ್ದೇ ಆದರೆ ಋತುಚಕ್ರ ಸರಿಯಾಗಿ ಆಗಲು ಸಹಾಯಕ.
೪. ಗರ್ಭಾಶಯದ ರಕ್ತಸ್ರಾವಕ್ಕೆ: ದಾಸವಾಳದ ಮೊಗ್ಗನ್ನು ಹಾಲಿನಲ್ಲಿ ಅರೆದು ಸೇವಿಸಿದರೆ ಈ ರೀತಿಯ ರಕ್ತಸ್ರಾವ ಹತೋಟಿಗೆ ಬರುತ್ತದೆ.
೫. ಸುಖ ಪ್ರಸವಕ್ಕೆ: ಮಲೇಷಿಯಾ ದೇಶದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಸುಲಭವಾಗಿ ಆಗಲು, ದಾಸವಾಳದ ಹೂವಿನ ರಸವನ್ನು ಇನ್ನಿತರ ಗಿಡಮೂಲಿಕೆಯೊಂದಿಗೆ ಔಷಧಿಯಾಗಿ ಕೊಡುತ್ತಾರೆ.
೬. ಉರಿಮೂತ್ರ: ದಾಸವಾಳದ ಹೂವಿನ ರಸಕ್ಕೆ ಕೆಂಪು ಕಲ್ಲುಸಕ್ಕರೆ ಬೆರಸಿ ೭ ದಿನಗಳ ಕಾಲ ಸತತವಾಗಿ ಸೇವಿಸುವುದರಿಂದ ಉರಿಮೂತ್ರ ಶಮನವಾಗುತ್ತದೆ.
೭. ಜಾನುವಾರುಗಳ ರೋಗಕ್ಕೆ: ಹಸುವಿಗೆ ಬರುವ ಕೆಲವು ಸಮಸ್ಯೆಗಳಿಗೆ ಗ್ರಾಮೀಣ ಪ್ರದೇಶದ ಜನ ಇಂದಿಗೂ ಇದನ್ನು ಬಳಸುತ್ತಾರೆ.
೮. ಆಯಾಸಕ್ಕೆ ಪರಿಹಾರ: ದಾಸವಾಳ ಹೂವಿನ ಪಾನೀಯ ಮಾಡಿ ಸೇವಿಸುವುದರಿಂದ ಆಯಾಸ, ಬಳಲಿಕೆ ಕಡಿಮೆ ಆಗುತ್ತದೆ.
೯. ಮಧುಮೇಹ: ಸಕ್ಕರೆ ಖಾಯಿಲೆ ಇರುವವರು ಬಿಳಿದಾಸವಾಳದ ಬೇರನ್ನು ಮಜ್ಜಿಗೆಯಲ್ಲಿ ಅರೆದು ಕುಡಿಯಬೇಕು.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧