ದಾಸರಹಳ್ಳಿ ಕೈ ಟಿಕೆಟ್ ಆಕಾಂಕ್ಷಿಗಳ ಜಗಳ

ಪೀಣ್ಯದಾಸರಹಳ್ಳಿ, ಮಾ.೨೯- ದಾಸರಹಳ್ಳಿ ವೀಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಒಳಜಗಳ ಇಂದು ಬೀದಿರಂಪಕ್ಕೆ ತಿರುಗಿ ಪರಿಸ್ಥಿತಿ ಪ್ರಕ್ಷುಬ್ದ ಸ್ಥಿತಿ ತಲುಪಿದಾಗ ಪೊಲೀಸರ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕೆ ಸಿ ಅಶೋಕ್,ನಾಗಭೂಷಣ್,ಕೃಷ್ಣಮೂರ್ತಿ, ಧನಂಜಯ್,ಡಾ.ನಾಗಲಕ್ಷ್ಮಿ,ಗೀತಾ ಶಿವರಾಂ,ರಮೇಶ್ ಗೌಡ,ತಿಮ್ಮರಾಜುಗೌಡ ಸೇರಿದಂತೆ ೯ ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು ಅದರಲ್ಲಿ ಧನಂಜಯ್ ಅವರು ಇಂದು ತಾವೇ ಕಾಂಗ್ರೆಸ್ ಅಭ್ಯರ್ಥಿ ಎಂದು ಕ್ಷೇತ್ರದ ದೇವಮೂಲೆ ಲಕ್ಷ್ಮೀಪುರದಿಂದ ಬೆಳಿಗ್ಗೆ ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಂತೆಯೇ ಉಳಿದ ಟಿಕೆಟ್ ಆಕಾಂಕ್ಷಿಗಳಾದ ಕೆ ಸಿ ಅಶೋಕ್, ನಾಗಭೂಷಣ್,ಗೀತಾ ಶಿವರಾಂ ಅವರುಗಳು ಸ್ಥಳಕ್ಕೆ ಧಾವಿಸಿ ಬಂದು ಕಾಂಗ್ರೆಸ್ ಪಕ್ಷದಿಂದ ದಾಸರಹಳ್ಳಿ ಕ್ಷೇತ್ರಕ್ಕೆ ಅಧಿಕೃತ ಅಭ್ಯರ್ಥಿ ಘೋಷಣೆಯೇ ಆಗಿಲ್ಲ,ಅದು ಹೇಗೆ ತಾವೇ ಅಭ್ಯರ್ಥಿ ಎಂದು ಹೇಳಿಕೊಂಡು ಯಾರನ್ನೂ ಗಣನೆಗೆ ತೆಗೆದುಕೊಳ್ಳದೆ ಪ್ರಚಾರ ಆರಂಭಿಸಿದ್ದೀರಾ ಎಂದು ವಾರ್ಡ್ ಅಧ್ಯಕ್ಷರುಗಳು,ಬ್ಲಾಕ್ ಅಧ್ಯಕ್ಷರುಗಳು ಧನಂಜಯ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಮಾತಿನ ಚಕಮಕಿ ಘರ್ಷಣೆಗೆ ತಿರುಗುವಂತೆ ಕಂಡಾಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.ವಿಷಯ ತಿಳಿದು ಸ್ಥಳಕ್ಜಾಗಮಿಸಿದ ಇತರೆ ಆಕಾಂಕ್ಷಿಗಳಾದ ಕೆ.ಸಿ. ಅಶೋಕ್, ನಾಭೂಷಣ್,ಗೀತಾ ಶಿವರಾಂ ಅವರುಗಳು ಸಹ ಧನಂಜಯ್ ಅವರನ್ನು ತರಾಟೆಗೆ ತೆಗೆದುಕೊಂಡು ಪಕ್ಷದಿಂದ ಟಿಕೆಟ್ ಪ್ರಕಟಿಸುವ ತನಕ ಅಧಿಕೃತವಾಗಿ ಚುನಾವಣೆ ಪ್ರಚಾರ ಆರಂಭಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.ಇದರಿಂದಾಗಿ ಧನಂಜಯ್ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ರ್‍ಯಾಲಿ ರದ್ದಾಯಿತು.
ಮಾಧ್ಯಮದವರೊಂದಿಗೆ ಮಾತನಾಡಿದ ಧನಂಜಯ್,ದಾಸರಹಳ್ಳಿ ಕ್ಷೇತ್ರದಲ್ಲಿ ೮ ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದೇವೆ.ಅದರಲ್ಲಿ ನನ್ನನ್ನು ಹೊರತುಪಡಿಸಿ ಎಲ್ಲರೂ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಅವರಿಂದ ಸುಫಾರಿ ಪಡೆದು ಟೋಕನ್ ಹೊಂದಾಣಿಕೆ ರಾಜಕಾರಣದ ಸಂಚು ಹೊಂದಿದ್ದಾರೆಂದು ನೇರವಾಗಿ ಆರೋಪಿಸಿದರು.
ಪಾಲಿಕೆ ಮಾಜಿ ಸದಸ್ಯ ಹಾಗೂ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾದ ನಾಗಭೂಷಣ್ ಮಾತನಾಡಿ ಕಾಂಗ್ರೆಸ್ ಪಕ್ಷ ಯಾರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ನಾವು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.