ದಾಸನಾಳ ಗ್ರಾಮದಲ್ಲಿ ಉಚಿತ ಜೀನ್ಸ್ ಮತ್ತು ಫ್ಯಾಷನ್ ಡಿಸೈನ್ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆ

ಸಂಜೆವಾಣಿ ವಾರ್ತೆ
ಗಂಗಾವತಿ, ಸೆ.17: ತಾಲೂಕಿನ ದಾಸನಾಳ ಗ್ರಾಮದಲ್ಲಿ ಸ್ನೇಹ ಸಂಸ್ಥೆ ಗಂಗಾವತಿ ವತಿಯಿಂದ ಉಚಿತ ಜೀನ್ಸ್ ಮತ್ತು ಫ್ಯಾಷನ್ ಡಿಸೈನ್ ಹೊಲಿಗೆ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು.
ಕೇಂದ್ರದ ಉದ್ಘಾಟನೆ ನೆರವೇರಿಸಿದ ಸ್ನೇಹ ಸಂಸ್ಥೆಯ ನಿರ್ದೇಶಕರಾದ ಟಿ. ರಾಮಾಂ ಜನೇಯ ಅವರು ಮಾತನಾಡಿ, ಸ್ನೇಹ ಸಂಸ್ಥೆ ಕಳೆದ ಮೂರು ವರ್ಷದಿಂದ ಗಂಗಾವತಿ, ಕನಕಗಿರಿ, ಕಾರಟಗಿ
ತಾಲೂಕಿನ ಆಯ್ದ 40 ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದೆ. ಯಾವುದೇ ಮಕ್ಕಳು ಬಾಲ್ಯವಿವಾಹ, ದೇವದಾಸಿ ಪದ್ಧತಿಗೆ ಒಳಗಾಗದಂತೆ ಮಕ್ಕಳನ್ನು ಸಶಕ್ತರ ನ್ನಾಗಿ ಮಾಡಲು ದಲಿತ ಸಮುದಾಯಗಳಲ್ಲಿ ಕಿಶೋರಿ ಸಂಘಗಳನ್ನು ಮಾಡುವುದರ ಮೂಲಕ ಉಚಿತ ಜೀನ್ಸ್ ಮತ್ತು ಫ್ಯಾಷನ್ ಡಿಸೈನ್ ಹೊಲಿಗೆ ತರಬೇತಿ, ಕಂಪ್ಯೂ ಟರ್ ತರಬೇತಿ ನೀಡಲಾಗುತ್ತದೆ. ತರಬೇತಿಗಳನ್ನು ಪಡೆದುಕೊಂಡು ದೇವದಾಸಿ ಪದ್ಧತಿಯನ್ನು ಮುಕ್ತಗೊಳಿಸುವ ಮೂಲಕ ಮಕ್ಕಳಿಗೆ ಸ್ವಾವಲಂಬನೆ ಬದುಕನ್ನು ನಡೆಸಲು ಮುಂದಾಗಬೇಕು ಎಂಬುದು ಸ್ನೇಹ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸ್ನೇಹ ಸಂಸ್ಥೆಯು ದಾಸನಾಳ ಗ್ರಾಮದ ಸಮುದಾಯ ಭವನದಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದ್ದು, ಬಸಾಪಟ್ಟಣ, ವೆಂಕಟಗಿರಿ, ದಾಸನಾಳ ಗ್ರಾಮಗಳ ದೇವದಾಸಿ ಮತ್ತು ದಲಿತ ಕುಟುಂಬಗಳ 40 ಅಭ್ಯರ್ಥಿಗಳು ಉಚಿತ ತರಬೇತಿ ಪಡೆದು ಸ್ವಾವಲಂಬನೆ ಬದುಕನ್ನು
ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ನೇಹ ಸಂಸ್ಥೆಯ ಸಹ ನಿರ್ದೇಶಕರಾದ ಕೆ.ಪಿ ಜಯ, ಗ್ರಾ.ಪಂ ಉಪಾಧ್ಯಕ್ಷರಾದ ರಾಜಶೇಖರ್, ಸದಸ್ಯರಾದ ಮರಿಯಪ್ಪ, ಶರಣಪ್ಪ, ಸೋಮಪ್ಪ, ಪ್ರಮೋದ್ ಹಾಗೂ ಸ್ನೇಹ ಸಂಸ್ಥೆಯ ಸಿಬ್ಬಂದಿಗಳಾದ ಪ್ರತಿಭಾ ಹೆಚ್.ಎಂ., ನಾಗರತ್ನ, ಭಾರತಿ ಮತ್ತು 40 ಹೊಲಿಗೆ ತರಬೇತಿ ಪಡೆಯುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.