ದಾವಣಗೆರೆ-ಹರಿಹರ ನಗರ ವ್ಯಾಪ್ತಿಯ ಎಲ್ಲ ಕೆರೆಗಳ ಸರ್ವೆಗೆ ನಿರ್ಧಾರ- ರಾಜನಹಳ್ಳಿ ಶಿವಕುಮಾರ್


ದಾವಣಗೆರೆ ನ.೨೧; ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಎಲ್ಲ ಕೆರೆಗಳ ಸರ್ವೆ ಕಾರ್ಯ ನಡೆಸಲು ನಿರ್ಧರಿಸಲಾಗಿದ್ದು, ಒತ್ತುವರಿ ಕಂಡುಬಂದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡು, ಯಾವುದೇ ಪ್ರಭಾವ ಅಥವಾ ಒತ್ತಡಗಳಿಗೆ ಮಣ ಯದೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದೂಡಾ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.
ದೂಡಾ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಾತಿ ಕೆರೆ ಸರ್ವೆ ಮಾಡಿಸಿದ ಸಂದರ್ಭದಲ್ಲಿ ೪೪ ಎಕರೆ ಅಧಿಕ ಜಾಗವನ್ನು ಹದ್ದುಬಸ್ತು ಮಾಡಿಸಿದ್ದು, ೪ ಎಕರೆ ೦೨ ಗುಂಟೆ ಕೆರೆಗೆ ಸಂಬಂಧಿಸಿದ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು ಕಂಡುಬಂದಿತ್ತು. ಸರ್ವೆ ನಂ. ೧೫೦ ರಲ್ಲಿ ೭೩.೧೧ ಎಕರೆ ಪ್ರದೇಶವಿದ್ದು, ಕೆರೆ ಪಕ್ಕದಲ್ಲಿ ೪೪.೪ ಎಕರೆ ಪ್ರದೇಶವನ್ನು ಹಿನ್ನೀರಿಗಾಗಿ ೧೯೭೨ ರಲ್ಲಿಯೇ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಕೆರೆ ಪೂರ್ವಭಾಗದ ಸರ್ವೆ ನಂ. ೧೪೮ ಮತ್ತು ೧೪೯ ರಲ್ಲಿ ಒತ್ತುವರಿಯಾಗಿರುವ ಭೂಮಿಯಲ್ಲಿ ಭೂಸ್ವಾಧೀನವಾಗದ ಕೆರೆಯ ಜಾಗವನ್ನೂ ಸೇರಿಸಿ, ಈ ಹಿಂದೆ ಬಡಾವಣೆ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದು ಕಂಡುಬಂದಿದೆ. ಬಡಾವಣೆಗೆ ಕಳೆದ ೨೦೧೮ ರಲ್ಲಿ ಪ್ರಾಧಿಕಾರದಿಂದ ಅಂತಿಮ ವಸತಿ ವಿನ್ಯಾಸ ಪಡೆದಿರುವುದನ್ನು ರದ್ದುಪಡಿಸಿ, ಸರ್ಕಾರಿ ಜಾಗ ವಾಪಸ್ ಪಡೆಯಲಾಗಿದೆ. ಸರ್ಕಾರಿ ಜಾಗವನ್ನು ಪಹಣ ಯಲ್ಲಿ ಸೇರಿಸಿ ಇದೀಗ ಸರಿಪಡಿಸಲಾಗಿದೆ. ಭೂಪರಿವರ್ತನೆ ಆದೇಶವನ್ನು ವಜಾ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದೊಡ್ಡಬಾತಿಗೆ ಬಂದು ಸೇರುತ್ತಿದ್ದ ಒಳಚರಂಡಿ ನೀರು ತಡೆಯಲು ೧.೯೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರ ಜೊತೆಗೆ ಟಿ.ವಿ. ಸ್ಟೇಷನ್ ಕೆರೆಗೆ ರೂ. ೨.೭೫ ಕೋಟಿ, ನಾಗನೂರು ಕೆರೆಗೆ ೪೪ ಲಕ್ಷ ರೂ., ಹೊನ್ನೂರು ಕೆರೆಗೆ ೩೫ ಲಕ್ಷ ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಹರಿಹರ ತಾಲ್ಲೂಕು ಅಗಸನಕಟ್ಟೆ ಕೆರೆ ವ್ಯಾಪ್ತಿಯಲ್ಲಿಯೂ ಒತ್ತುವರಿ ಕಂಡುಬಂದಿದ್ದು, ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು ೧೨ ಕೆರೆಗಳಿದ್ದು ಎಲ್ಲ ಕೆರೆಗಳ ವ್ಯಾಪ್ತಿ ಕುರಿತು ದಾಖಲೆಗಳ ಸಹಿತ ಸರ್ವೆ ಮಾಡಿಸಲಾಗುವುದು. ಅಲ್ಲದೆ ಪ್ರಾಧಿಕಾರದ ವ್ಯಾಪ್ತಿಯ ಎಲ್ಲ ಪಾರ್ಕ್‌ಗಳ ಸರ್ವೇ ಕೂಡ ಮಾಡಿಸಲಾಗುವುದು. ಸರ್ಕಾರಿ ಭೂಮಿ ಒತ್ತುವರಿಯಾಗಿರುವುದು ಕಂಡುಬಂದಲ್ಲಿ ಯಾರದೇ ಪ್ರಭಾವ ಅಥವಾ ಒತ್ತಡಕ್ಕೂ ಮಣ ಯದೆ ಕಾನೂನು ರೀತ್ಯಾ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ದೂಡಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ರಸ್ತೆ, ಪಾರ್ಕ್ ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಇದ್ದಲ್ಲಿ, ಯಾರು ಬೇಕಾದರೂ ದೂರು ಸಲ್ಲಿಸಬಹುದು ಎಂದರು.
ಬಾತಿ ಕೆರೆ ವ್ಯಾಪ್ತಿ ಮನರಂಜನಾ ಪಾರ್ಕ್ : ದಾವಣಗೆರೆ-ಹರಿಹರ ವ್ಯಾಪ್ತಿಯಲ್ಲಿ ಉತ್ತಮ ಪ್ರವಾಸಿ ಹಾಗೂ ಮನರಂಜನಾ ತಾಣಗಳು ಯಾವುದೂ ಇಲ್ಲ. ಇಲ್ಲಿನ ಜನ, ವಾರಾಂತ್ಯದ ವಿರಾಮಕ್ಕೆ ಬೇರೆ ಬೇರೆ ಜಿಲ್ಲೆಗಳಿಗೆ ಹೋಗುವ ಪರಿಪಾಠವಿದೆ. ಹೀಗಾಗಿ, ಈ ಭಾಗದಲ್ಲಿ ಒಂದು ಮನರಂಜನಾ ಸ್ಥಳ ನಿರ್ಮಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ೪೦ ಎಕರೆ ಪ್ರದೇಶವನ್ನು ಬಾತಿ ಕೆರೆ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದು, ೨೦ ಕೋಟಿ ರೂ. ಅನುದಾನವನ್ನು ಅಭಿವೃದ್ಧಿಗೆ ಬಳಸಲಾಗುವುದು. ಕೆರೆಯ ಸುತ್ತ ವಾಕಿಂಗ್ ಪಾತ್, ಅಲಂಕಾರಿಕ ದೀಪಗಳು, ತೇಲುವ ಹೋಟೆಲ್, ಬೋಟಿಂಗ್, ವಾಟರ್ ಗೇಮ್ಸ್ ನಂತಹ ಮನರಂಜನೆಗೆ ಸೂಕ್ತವಾದ ವ್ಯವಸ್ಥೆ ಕೈಗೊಳ್ಳಲಾಗುವುದು. ಜಿಲ್ಲೆಯ ಜನರಷ್ಟೇ ಅಲ್ಲದೆ, ವಿವಿಧ ಜಿಲ್ಲೆಗಳಿಂದಲೂ ಜನರು ಬರುವಂತೆ ಆಕರ್ಷಕವಾಗಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಪಾರ್ಕ್‌ಗಳಿಗೆ ಹುತಾತ್ಮರ ಹೆಸರು : ಮಹಾತ್ಮಾ ಗಾಂಧೀಜಿಯವರು ೧೯೪೨ ರಲ್ಲಿ ಕರೆಕಟ್ಟ ’ಬ್ರಿಟೀಷರೆ ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಚಳುವಳಿ ಸಂದರ್ಭದಲ್ಲಿ ದಾವಣಗೆರೆಯಲ್ಲಿಯೂ ಈ ಚಳುವಳಿಗೆ ಧುಮುಕಿ ಪ್ರಾಣಾರ್ಪಣಡ ಮಾಡಿದ ವೀರ ಸ್ವಾತಂತ್ರ್ಯ ಯೋಧರಾದ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹದಡಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಮಾಗಾನಹಳ್ಳಿ ಹನುಮಂತಪ್ಪ ಅವರ ಹೆಸರುಗಳನ್ನು ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ೦೬ ಪಾರ್ಕ್‌ಗಳಿಗೆ ನಾಮಕರಣ ಮಾಡಲಾಗಿದೆ. ಪ್ರಾಧಿಕಾರ ಕಚೇರಿ ಸಭಾಂಗಣಕ್ಕೆ ಲೋಕಸಭಾ ಸದಸ್ಯರಾಗಿದ್ದ ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಅವರ ಹೆಸರಿಡಲು ತೀರ್ಮಾನಿಸಿದೆ. ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿನ ಸರ್ಕಾರಿ ನೌಕರರ ಭವನದ ಎದುರು ಇರುವ ಪ್ರಾಧಿಕಾರದ ಜಾಗಕ್ಕೆ ಅಮರ್ ಜವಾನ್ ಉದ್ಯಾನವನ ಎಂದು ನಾಮಕರಣ ಮಾಡಲಾಗಿದ್ದು, ಹುತಾತ್ಮ ಸೈನಿಕರ ಸ್ಮಾರಕ ನಿರ್ಮಾಣಕ್ಕೆ ೭೫ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.
ಪ್ರಾಧಿಕಾರದ ಸದಸ್ಯರುಗಳಾದ ರಾಜು ಲೋಕಡೆ, ದೇವೀರಮ್ಮ, ರುದ್ರೇಶ್, ಸೌಭಾಗ್ಯ ಮುಕುಂದ ಅವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.