ದಾವಣಗೆರೆ ಸಮಾವೇಶ ಭಾಜಪ ಭವಿಷ್ಯದ ದಿಗ್ವಿಜಯದ ಸಂಕೇತ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ, ಮಾ. 25: ದಾವಣಗೆರೆಯ ವಿಜಯಸಂಕಲ್ಪ ಯಾತ್ರೆಯ ಸಮಾವೇಶ ಭಾಜಪದ ಭವಿಷ್ಯದ ದಿಗ್ವಿಜಯದ ಸಂಕೇತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ದಾವಣಗೆರೆಯಲ್ಲಿ ವಿಜಯಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಗೆಲ್ಲಲಿದೆ
ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಜನ ಕಲ್ಯಾಣದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಜನಸ್ತೋಮದಿಂದ ದಿಗ್ವಿಜಯದ ಸೂಚನೆ ಸಿಕ್ಕಿದೆ ಎಂದರು.

ಜಗತ್ತು ಕಂಡ ಶ್ರೇಷ್ಠ ನಾಯಕ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಗತ್ತು ಕಂಡ ಶ್ರೇಷ್ಠ ನಾಯಕರು. ವಿಶ್ವದ ದೊಡ್ಡಣ್ಣ ಎನಿಸಿದ ಅಮೆರಿಕಾ ಕೂಡ ಇವರಿಗೆ ತಲೆ ಬಾಗಿದೆ. ಕೋವಿಡ್ ಸಂದರ್ಭದಲ್ಲಿ ವಿಶ್ವದ ಶ್ರೀಮಂತ ರಾಷ್ಟಗಳು ಶಕ್ತಿಗುಂದಿದಾಗ, ನಮ್ಮ ದೇಶದ ಆರ್ಥಿಕತೆಯನ್ನು ಸುಸ್ಥಿರ ವಾಗಿರಿಸಿದವರು. ಪಕ್ಕದ
ಪಾಕಿಸ್ತಾನದ ಜನರು ಕೂಡ ಮೋದಿಯಂತಹ ನಾಯಕ ಬೇಕು ಎನ್ನುತ್ತಿದ್ದಾರೆ ಎಂದರು.

ದೇಶದ ಜನರ ಬಗ್ಗೆ ಅವರಿಗೆ ಕಾಳಜಿಯಿಲ್ಲದವರು
ಆದರೆ ರಾಹುಲ್‌ ವಿದೇಶಕ್ಕೆ ಹೋಗಿ ಮೋದಿಯವರು ಹಾಗೂ ಪ್ರಜಾಪ್ರಭುತ್ವವನ್ನು ಹೀಯಾಳಿಸಿದ್ದಾರೆ. ದೇಶದ ಜನರ ಬಗ್ಗೆ ಅವರಿಗೆ ಕಾಳಜಿಯಿಲ್ಲ. ದೇಶದ ಬಗ್ಗೆ ಅವಹೇಳನ ಮಾಡುವವರು ನಮಗೆ ಬೇಕೆ ಎಂಬ ಬಗ್ಗೆ ತೀರ್ಮಾನ ಮಾಡಬೇಕು ಎಂದರು.

5 ಪಟ್ಟು ಅನುದಾನ
ಡಬಲ್ ಇಂಜಿನ್ ಸರ್ಕಾರ ಯುಪಿಎ ಸರ್ಕಾರಕ್ಕಿಂತ 5 ಪಟ್ಟು ಅನುದಾನ ನೀಡಿದೆ. ರಾಜ್ಯದಲ್ಲಿ ಆರು ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿಯನ್ನು 64 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದೆ. ಕರ್ನಾಟಕ ರೈಲ್ವೆಗೆ 7351 ಕೋಟಿ ರೂ ಅನುದಾನ ಒದಗಿಸಲಾಗಿದೆ ಎಂದರು.

ಕರ್ನಾಟಕ ಮೇಲೆ ವಿಶೇಷ ಪ್ರೀತಿ
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಿದೆ. ಕರ್ನಾಟಕ ನೀರಾವರಿ ಯೋಜನೆಗೆ ಹೆಚ್ಚು ಅನುದಾನ ನೀಡುವ ಮೂಲಕ ಮೋದಿಯವರಿಗೆ ಕರ್ನಾಟಕ ಮೇಲೆ ವಿಶೇಷ ಪ್ರೀತಿ ಇದೆ ಎಂದು ಸ್ಪಷ್ಟವಾಗಿದೆ ಎಂದರು.

ಕಳಸಾ ಬಂಡೂರಿ ಯೋಜನೆ ಪೂರ್ಣವಾಗಲಿದೆ
ಕಳಸಾ-ಬಂಡೂರಿ ಯೋಜನೆಗೆ ಡಿಪಿಆರ್ ಆಗಿದ್ದು, ಟೆಂಡರ್ ಕರೆಯಲಾಗಿದೆ. ಬಿಜೆಪಿಯಿಂದಲೇ ಕಳಸಾ ಬಂಡೂರಿ ಯೋಜನೆ ಪೂರ್ಣ ಆಗಲಿದೆ ಎಂದರು. ಕಳೆದ ಮೂರು ವರ್ಷಗಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಜಲ್ ಜೀವನ್ ಮಿಷನ್ ಅಡಿಯಲ್ಲಿ ಕಲ್ಪಿಸಲಾಗಿದೆ. . ಮೋದಿಯವರದ್ದು ಭಗೀರಥ ಪ್ರಯತ್ನ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.17 ಲಕ್ಷ ಮನೆಗಳಿಗೆ ಪಿಎಂ ಆವಾಸ್ ಯೋಜನೆಯಡಿ ಮಂಜೂರಾತಿ ನೀಡಲಾಗಿದೆ. ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ, 2.50 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ, ಉಜ್ವಲ ಯೋಜನೆ, ಯುವಕರಿಗೆ ಮುದ್ರಾ ಯೋಜನೆ ರೂಪಿಸಲಾಗಿದೆ ಎಂದರು.

ರಾಜ್ಯದ ಅಭಿವೃದ್ದಿ
ರಾಜ್ಯದಲ್ಲಿ 11 ಲಕ್ಷ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ, 47 ಲಕ್ಷ ಡೀಸಲ್ ಸಹಾಯಧನ, ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷದವರೆಗೆ ಸಾಲ, ರೈತರಿಗೆ ಜೀವವಿಮೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆ,ಮೀಸಲಾತಿ ಹೆಚ್ಚಳ ಮುಂತಾದ ಯೋಜನೆಗಳಿಂದ ದುಡಿಯುವ ವರ್ಗಕ್ಕೆ ಬೆಂಬಲ ನೀಡಲಾಗಿದೆ ಎಂದರು. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಲು ಸಂಕಲ್ಪ ತೋಡೋಣ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.