ದಾವಣಗೆರೆ: ಶೀಘ್ರದಲ್ಲೇ ಎಎಪಿ ಜಿಲ್ಲಾ ಸಮಿತಿ ರಚನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೨೦: ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಸ್ವತಂತ್ರ ಸರ್ಕಾರ ರಚಿಸಿ, ರಾಷ್ಟ್ರೀಯ ಪಕ್ಷವಾಗಿ ರಾಷ್ಟ್ರದಲ್ಲಿ ಭದ್ರವಾಗಿ ನೆಲೆಯೂರಿರುವ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿಯೂ ಬೇರೂರಲು ದಾಪುಗಾಲು ಹಾಕುತ್ತಿದೆ. ಇದೀಗ ದಾವಣಗೆರೆ ಜಿಲ್ಲಾ ಸಮಿತಿಯನ್ನು ರಚಿಸಲು ಪದಾಧಿಕಾರಿಗಳ ಆಯ್ಕೆ ವಿಚಾರವಾಗಿ ಜಿಲ್ಲಾ ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನು ರಾಜ್ಯ ದಕ್ಷಿಣ ವಿಭಾಗದ ಸಂಘಟನಾ ಕಾರ್ಯದರ್ಶಿ ಬಿ. ಟಿ. ನಾಗಣ್ಣನವರ ನೇತೃತ್ವದಲ್ಲಿ ನಡೆಸಲಾಯಿತು.ಎಎಪಿ ಸರ್ಕಾರದಿಂದ ಪ್ರೇರಣೆಗೊಂಡು ಘೋಷಿಸಲಾಗಿರುವ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಿಲ್ಲ. ಎಎಪಿ ಸರ್ಕಾರಗಳು ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿ ಯೋಜನೆಗಳು ಅತ್ಯಂತ ವೈಜ್ಞಾನಿಕವಾಗಿವೆ. ಆದರೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪರಾಮರ್ಶಿಸದೆ ಕೇವಲ ಮತಗಳಿಗಾಗಿ ಆತುರ ಆತುರವಾಗಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಹಾಗಾಗಿ ಸ್ಥಳೀಯ ಮಟ್ಟದಲ್ಲಿ ಎಎಪಿ ಪಕ್ಷವನ್ನು ಸಂಘಟಿಸುವ ಮೂಲಕ ಮಾದರಿ ಸರ್ಕಾರ ರಚಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.ಸ್ಥಳೀಯ ಚುನಾವಣೆಗಳು ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಎಎಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಸಭೆಯಲ್ಲಿ  ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜ್ಯ ಕಾರ್ಯದರ್ಶಿ ರಾಘವೇಂದ್ರ, ಹರಿಹರ ಅಭ್ಯರ್ಥಿ ಗಣೇಶ್  ದುರ್ಗದ್ , ಮಾಜಿ ಜಿಲ್ಲಾಧ್ಯಕ್ಷ ಚಂದ್ರು ಬಸಂತಪ್ಪ, ಮುಖಂಡರಾದ ಅರುಣ್ ಕುಮಾರ್, ಆದಿಲ್, ರವೀಂದ್ರ ರೆ, ಸಮೀರ್ ಹಸನ್, ಸುರೇಶ್, ಧರ್ಮನಾಯಕ್ ಮತ್ತಿತರರು ಹಾಜರಿದ್ದರು.