ದಾವಣಗೆರೆ; ಶಕ್ತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಚಾಲನೆ

ದಾವಣಗೆರೆ.ಜೂ.೧೧: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುವ ಶಕ್ತಿ ಯೋಜನೆಗೆ ಭಾನುವಾರ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಿದರು.ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿರುವ ತಾತ್ಕಾಲಿಕ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಅವರು ತಮ್ಮ ಸರ್ಕಾರದ ಪಂಚ ಗ್ಯಾರಂಟಿ ಗಳ ಪೈಕಿ ಮೊದಲ ಗ್ಯಾರಂಟಿ ಜಾರಿಗೆ ತರುವ ಮೂಲಕ ತಮ್ಮದು ನುಡಿದಂತೆ ನಡೆದ ಸರ್ಕಾರ ಎಂಬುದಕ್ಕೆ ಮುನ್ನುಡಿ ಬರೆದರು. ಅಲ್ಲದೆ ಮುಂದಿನ ನಾಲ್ಕು ಗ್ಯಾರಂಟಿ ಜಾರಿಯ ಬಗ್ಗೆಯೂ ಗ್ಯಾರಂಟಿ ನೀಡಿದರು.ಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಮಹಿಳಾ ಸಮುದಾಯಕ್ಕೆ ಶಕ್ತಿ ನೀಡ ಲಾಗಿದೆ. ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿ ಸುವ ಅವಕಾಶ ನೀಡುವುದರಿಂದ ಸಾಕಷ್ಟು ಅನುಕೂಲ ಆಗಲಿದೆ. ‌ದಿನ ನಿತ್ಯದ ಕೆಲಸ ಕಾರ್ಯ, ಸರ್ಕಾರಿ, ಖಾಸಗಿ ಕಚೇರಿಗಳ ಉದ್ಯೋಗಸ್ಥರು, ವಿದ್ಯಾರ್ಥಿ‌ನಿ ಯರು ಹಣ ನೀಡದೆ ಸಂಚರಿಸಬಹುದು ಎಂದು ಸಚಿವ ಮಲ್ಲಿಕಾರ್ಜುನ್ ತಿಳಿಸಿದರು.ಶಕ್ತಿ… ಯೋಜನೆಯ ಬಗ್ಗೆ ಮಹಿಳೆಯರು ಸಂತಸ ವ್ಯಕ್ತಪಡಿಸಿದರು. ಗವರ್ನಮೆಂಟ್ ಬಸ್ ಗಳಲ್ಲಿ ಉಚಿತವಾಗಿ ಪ್ರಯಣಿಸಲು ಅವಕಾಶ ನೀಡಿರುವುದರಿಂದ ಬಡವರಿಗೆ ಸೇರಿದಂತೆ ಎಲ್ಲರಿಗೂ ಅನುಕೂಲ ಆಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಸಾರಿಗೆ ಸಂಸ್ಥೆ ದಾವಣಗೆರೆ ವಿಭಾಗೀಯ ನಿಯಂತ್ರಣಧಿಕಾರಿ ಸಿ.ಇ. ಶ್ರೀನಿವಾಸ್ ಮೂರ್ತಿ, ದಾವಣಗೆರೆ ವಿಭಾಗದಲ್ಲಿ ನ 368 ಮಾರ್ಗಗಳಲ್ಲಿ 62 ಬಸ್ ಮಾರ್ಗ ಹೊರತುಪಡಿಸಿ ಇನ್ನುಳಿದ 306 ಮಾರ್ಗಗ ಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು. ಸಾಮಾನ್ಯ, ಎಕ್ಸ್‌ಪ್ರೆಸ್‌ ಬಸ್ ಗಳಲ್ಲಿ ಸಂಚರಿಬಹುದು. ಮಹಿಳೆಯರು ಉಚಿತವಾಗಿ ಸಂಚರಿಸುವ ಬಸ್ ಗಳಿಗೆ ಸ್ಟಿಕ್ಕರ್ ಅಂಟಿಸಲಾಗಿರುತ್ತದೆ ಅದೇ ಬಸ್ ಗಳಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆಧಾರ್ ಕಾರ್ಡ್, ಫೋಟೋ ಇರುವಂತಹ ಯಾವುದಾದರೂ ಒಂದು ದಾಖಲೆ ತೋರಿಸಬೇಕು ಎಂದು ತಿಳಿಸಿದರು.ಶಾಸಕರಾದ ಶಾಮನೂರು ಶಿವಶಂಕರಪ್ಪ, ‌ಕೆ.ಎಸ್. ಬಸವಂತಪ್ಪ, ಬಸವರಾಜ ಶಿವ ಗಂಗಾ, ಬಿ. ದೇವೇಂದ್ರಪ್ಪ, ಡಿ.ಜಿ. ಶಾಂತನಗೌಡ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ರಕ್ಷಣಾಧಿಕಾರಿ ಡಾ. ಕೆ. ಅರುಣ್‌, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸುರೇಶ್ ಇಟ್ನಾಳ್, ಕೆಎಸ್ಸಾರ್ಟಿಸಿ ದಾವಣಗೆರೆ ವಿಭಾಗ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮೂರ್ತಿ ಇತರರು ಇದ್ದರು.