ದಾವಣಗೆರೆ ವಿವಿಯ ಸಮಗ್ರ ಅಭಿವೃದ್ಧಿಗೆ ಆದ್ಯತೆ

ದಾವಣಗೆರೆ.ಏ.೮; ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಕ್ಕೆ ಮಾತ್ರ ಸೀಮಿತವಾಗಿರದ ದಾವಣಗೆರೆ ವಿಶ್ವವಿದ್ಯಾನಿಲಯವು ಅವರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು 
ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.ದಾವಣಗೆರೆ ವಿಶ್ವವಿದ್ಯಾಲಯದಲ್ಲಿಂದು ನಡೆದ 8 ನೇ ಘಟಿಕೋತ್ಸವ ಸಮಾರಂಭದಲ್ಲಿ ಸ್ವಾಗತ ನುಡಿಗಳನ್ನಾಡಿದ ಅವರು ದಾವಣಗೆರೆ ವಿವಿಯು ಹತ್ತು ಕುಗ್ರಾಮಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಆದ್ಯತೆ ನೀಡಿದೆ. ಆ ಶಾಲೆಯ ಮಕ್ಕಳಿಗೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.ಮಕ್ಕಳಿಗೆ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರಾಯೋಗಿಕವಾಗಿ ತಿಳಿಸಲು ಗಮನ ನೀಡಿದೆ. ಅದಕ್ಕಾಗಿ ಗ್ರಾಮದಲ್ಲಿಯೇ ಇದ್ದು ಅಧ್ಯಯನ ಮಾಡಲು,, ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಒಳಗೊಂಡ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ನುಡಿದರು.ಇದೇ ಸಂದರ್ಭದಲ್ಲಿ ಕುಲಪತಿ ಪ್ರೊ. ಹಲಸೆ ಅವರು, ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದ 44 ವಿದ್ಯಾರ್ಥಿಗಳಿಗೆ 74 ಚಿನ್ನದ ಪದಕಗಳನ್ನು ನೀಡಿದರು. ಅಲ್ಲದೆ 11,193 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. 7 ಪಿಎಚ್‌ಡಿ ಹಾಗೂ ಇಬ್ಬರು ಎಂ.ಫಿಲ್ ಪದವಿಗಳನ್ನ ನೀಡಿದರು. ವಿವಿಧ ನಿಕಾಯಗಳ ಡೀನ್‌ರು ಚಿನ್ನದ ಪದಕ ವಿಜೇತರು ಮತ್ತು ಪದವೀಧರರ ಹೆಸರನ್ನು ಪ್ರಕಟಿಸಿದರು. ಇದಕ್ಕೂ ಮುನ್ನ ಆಡಳಿತ ಕಚೇರಿಯಿಂದ ವೇದಿಕೆ ವರೆಗೆ ಪಥಸಂಚಲನ ನಡೆಯಿತು. ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಸ್ವಾಮಿ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.