ದಾವಣಗೆರೆ ಪಾಲಿಕೆ ಸಾಮಾನ್ಯ ಸಭೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೨೮: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ  ನಡೆದ ಸಾಮಾನ್ಯ ಸಭೆಯಲ್ಲಿ ರಾಷ್ಟ್ರಗೀತೆ, ನಾಡಗೀತೆ ಹಾಡುವ ಸಂದರ್ಭದಲ್ಲಿ ಕಪ್ಪುಪಟ್ಟಿ ಧರಿಸಿದ್ದ ಬಿಜೆಪಿ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜೊತೆಗೆ ಸಭೆಯಿಂದ ಹೊರಕ್ಕೆ ಹಾಕಬೇಕು ಎಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡುವಾಗ ಕಪ್ಪುಪಟ್ಟಿ ಕಟ್ಟಿಕೊಳ್ಳುವಂತಿಲ್ಲ.‌ ಆದರೂ, ಬಿಜೆಪಿ ಸದಸ್ಯರು ಕಪ್ಪು ಪಟ್ಟಿ ಧರಿಸುವ ಮೂಲಕ ರಾಷ್ಟ್ರಗೀತೆ, ನಾಡಗೀತೆಗೆ ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ. ಅಪಮಾನ ಮಾಡಿರುವ ಬಿಜೆಪಿ ಸದಸ್ಯರನ್ನು ಸಭೆಯಿಂದ ಹೊರ ಹಾಕಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.ತಾವು ನಾಡಗೀತೆ, ರಾಷ್ಟ್ರಗೀತೆ ಹಾಡುವಾಗ ಕಪ್ಪು ಪಟ್ಟಿ ಧರಿಸಿರಲಿಲ್ಲ ಎಂದು ಬಿಜೆಪಿ ಸದಸ್ಯರು ಹೇಳಿದರು.  ಕಪ್ಪು ಪಟ್ಟಿ ಧರಿಸಿರುವುದಕ್ಕೆ ವೀಡಿಯೋ ಸಾಕ್ಷಿ ಇದೆ ಎಂದು ಕಾಂಗ್ರೆಸ್ ಸದಸ್ಯರು ಹೇಳಿದರು.ರಾಜ್ಯಸಭಾ ಸದಸ್ಯರಾಗಿ ನಾಸೀರ್ ಅಹಮದ್ ಆಯ್ಕೆಯಾದ ನಂತರ ವಿಜಯೋತ್ಸವ ಆಚರಿಸುವಾಗ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಖಂಡನೀಯ. ಅದರ ವಿರುದ್ಧ ಖಂಡನಾ‌ ನಿರ್ಣಯ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದ ಘಟನೆಯೂ ನಡೆಯಿತು.ಮಾತಿನ ಚಕಮಕಿ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರೊಬ್ಬರು ಅವಾಚ್ಯ ಶಬ್ದ ಬಳಸಿದರು. ಘಟನೆಯ ತನಿಖೆ ನಡೆಯುತ್ತಿದೆ. ಯಾರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೋ ಅಂತಹವರನನ್ನು ಗಲ್ಲಿಗೆ ಏರಿಸಬೇಕು ಎಂದು ಒತ್ತಾಯಿಸಿದರು.ರಾಷ್ಟ್ರದ್ರೋಹ ಹೇಳಿಕೆ ನೀಡಿದವರ ಪರ ಇರುವವರಿಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಕೂಗಿದರು. ರಾಷ್ಟ್ರಗೀತೆಗೆ ಅಪಮಾನ ಮಾಡಿದವರಿಗೆ ಧಿಕ್ಕಾರ ಎಂದು ಕಾಂಗ್ರೆಸ್ ಸದಸ್ಯರು ಕೂಗಿದರು.‌ ಸಾಕಷ್ಟು ಗದ್ದಲ ಏರ್ಪಟ್ಟಿದ್ದರಿಂದ ಮೇಯರ್ ವಿನಾಯಕ ಪೈಲ್ವಾನ್ ಸಭೆಯನ್ನು ಐದು ನಿಮಿಷಗಳ ಕಾಲ ಮುಂದೂಡಿದರು.ಬಳಿಕ ಸಭೆ ಮುಂದುವರೆಯಿತು ಈ ವೇಳೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.ಸಭೆಯಲ್ಲಿ ಆಯುಕ್ತರಾದ ರೇಣುಕಾ,ಮೇಯರ್ ವಿನಾಯಕ್ ಪೈಲ್ವಾನ್, ಉಪಮೇಯರ್ ಯಶೋಧ ಯಗ್ಗಪ್ಪ ಉಪಸ್ಥಿತರಿದ್ದರು.