ದಾವಣಗೆರೆ ನಗರದಲ್ಲಿ  ರಾರಾಜಿಸುತ್ತಿವೆ ಆಂಗ್ಲ ಫಲಕಗಳು;  ಕ್ರಮಕ್ಕೆ ಆಗ್ರಹ


ಸಂಜೆವಾಣಿ ವಾರ್ತೆ
ದಾವಣಗೆರೆ. ಮೇ.೨೭; ಕರ್ನಾಟಕ ರಾಜ್ಯಾದ್ಯಂತ  ದಿನನಿತ್ಯ  ಕನ್ನಡಪರ ಹೋರಾಟಗಾರರು  ಕನ್ನಡ ಉಳಿವಿಗಾಗಿ  ಹೋರಾಟ ನಡೆಸುತ್ತಿದ್ದಾರೆ. ಕನ್ನಡದ ಹೆಸರು ಹೇಳಿಕೊಂಡು ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಗೆಲ್ಲುತ್ತಿದ್ದಾರೆ. ಆದರೆ ಸರ್ಕಾರ  ಕನ್ನಡ ರಕ್ಷಣೆಗಾಗಿ ಕಾನೂನುಗಳನ್ನು ಮಾಡಿ  ಅದನ್ನು ಪಾಲಿಸದೆ ಕಣ್ಮುಚ್ಚಿ ಕುಳಿತಿದೆ. ಪ್ರಚಾರದ ಬೋರ್ಡ್ ಗಳು   ಜಾಹೀರಾತು ಫ್ಲೆಕ್ಸ್ ಗಳಲ್ಲಿ   ಶೇಕಡ  60 % ಕನ್ನಡ ಕಡ್ಡಾಯ ಎಂಬ  ಸರ್ಕಾರದ  ಆದೇಶವನ್ನು ಗಾಳಿಗೆ ತೂರಿ  ಫ್ಲೆಕ್ಸ್ ಬೋರ್ಡ್ ಗಳಲ್ಲಿ  ಒಂದು ಅಕ್ಷರವೂ  ಕನ್ನಡವೂ ಇಲ್ಲದ ಕಾನೂನು ಬಾಹಿರ  ಫ್ಲೆಕ್ಸ್ ಅಳವಡಿಕೆಗೆ ದಾವಣಗೆರೆ ಮಹಾನಗರ ಪಾಲಿಕೆಯು  ಪರವಾನಗಿ ನೀಡುತ್ತಿದೆ‌ ಎಂದು ಕರುನಾಡ ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಟಿ.ಗೋಪಾಲಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದಾವಣಗೆರೆಯಲ್ಲಿ ಪಾಲಿಕೆ ಆಯುಕ್ತರು, ಅಧಿಕಾರಿಗಳು  ಕನ್ನಡ ವಿರೋಧಿಗಳಾಗಿದ್ದಾರೆ. ನವಂಬರ್ ನಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳ   ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಾರೆ. ದಾವಣಗೆರೆ ನಗರದ ತುಂಬಾ ಕಾನೂನು ಬಾಹಿರ ಫ್ಲೆಕ್ಸ್ ಗಳು ಕಸದ ತೊಟ್ಟಿಯಂತೆ ಕಾಣುತ್ತಿವೆ. ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದೆ. ಮಹಾನಗರ ಪಾಲಿಕೆ ನೀಡಿರುವ ಪರವಾನಗಿ  ಅವಧಿ ಮೀರಿದರೂ ಫ್ಲೆಕ್ಸ್ ಗಳನ್ನು ತೆರವುಗೊಳಿಸುವುದಿಲ್ಲ ಎಂದು ಆರೋಪಿಸಿದರು. ಪಾಲಿಕೆಯ ಪರವಾನಗಿ ಪಡೆಯದೆ  ಕಂಡ ಕಂಡ ವಿದ್ಯುತ್ ಕಂಬಗಳು, ಟ್ರಾಫಿಕ್ ಸಿಗ್ನಲ್ ಗಳ ಕಂಬಗಳ ಮೇಲೆಲ್ಲಾ ಫ್ಲೆಕ್ಸ್ ಗಳನ್ನು ಕಟ್ಟಿರುವುದರಿಂದ ಗಾಳಿ ಮಳೆಗೆ  ವಿದ್ಯುತ್ ಅವಗಡಗಳು ಸಂಭವಿಸಲಿದ್ದು. ಮಹಾನಗರ ಪಾಲಿಕೆಯ ಆಯುಕ್ತರು ಅಧಿಕಾರಿಗಳು  ಇದನ್ನೆಲ್ಲಾ ಕಂಡು ಕಾಣದಂತೆ ಕಣ್ಣು ಮುಚ್ಚಿ ಕುಳಿತಿರುವುದು  ನೋಡಿದರೆ. ಕಾನೂನು ಬಾಹಿರವಾಗಿ ಇವರೆಲ್ಲಾ ಸಹಕಾರ ನೀಡುತ್ತಿರುವುದು ತಿಳಿಯುತ್ತದೆ. ತಕ್ಷಣವೇ ನಗರದಲ್ಲಿ ಆಂಗ್ಲಮಯ, ಹಾಗೂ ಕಾನೂನು ಬಾಹಿರ  ಫ್ಲೆಕ್ಸ್ ಗಳಿಗೆ    ಪರವಾನಗಿ ನೀಡಿರುವ, ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು  ಕನ್ನಡ ಪ್ರೀತಿಯನ್ನು  ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದರು. ತಕ್ಷಣವೇ ಸ್ಪಂದಿಸದಿದ್ದರೆ  ಪಾಲಿಕೆಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕೆ .ಟಿ ಗೋಪಾಲ ಗೌಡ್ರು ತಿಳಿಸಿದ್ದಾರೆ.