ದಾವಣಗೆರೆ ದಕ್ಷಿಣ, ಉತ್ತರದಲ್ಲಿ ಅಬ್ಬರದ ಪ್ರಚಾರ ;ಕಾಂಗ್ರೆಸ್ ವಿರುದ್ಧ ಗುಡುಗಿದ ಅಭ್ಯರ್ಥಿ

 ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.೬ : ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ. ಅವರ ಮೇಲೆ ನಿಜವಾದ ಕಾಳಜಿ ಇಲ್ಲ. ಮೂರು ತಲೆಮಾರು ದೇಶದ ಪ್ರಧಾನಿಗಳಾಗಿದ್ದ ಗಾಂಧಿ ಕುಟುಂಬಕ್ಕೆ ದೇಶದ ಬಡವರ ಕಷ್ಟ ಅರ್ಥವಾಗಲೇ ಇಲ್ಲ. ರೋಟಿ-ಕಪಡಾ-ಮಕಾನ್ ಎಂಬುವುದು 60 ವರ್ಷ ಕೇವಲ ಘೋಷಣೆಯಾಗಿಯೇ  ಉಳಿದಿತ್ತು. ಅದನ್ನು ಪೂರ್ತಿ ಮಾಡುವ ನಿಟ್ಟಿನಲ್ಲಿ ಕಾರ್ಯ ಮಾಡಿದ್ದು ನರೇಂದ್ರ ಮೋದಿ ಜೀ ಅವರೇ ವಿನಃ ಕಾಂಗ್ರೆಸ್ ಅಲ್ಲ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಕಾಂಗ್ರೆಸ್ ವಿರುದ್ಧ ಗುಡುಗಿದರು.ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊನೆ ದಿನದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಬಡತನ ನಿರ್ಮೂಲನೆಗೆ ಪ್ರಮಾಣಿಕ ಪ್ರಯತ್ನ ಮಾಡಲೇ ಇಲ್ಲ. ಗಾಂಧಿ ಪರಿವಾರ ತಮ್ಮ ಕುಟುಂಬದ ಅಸ್ತಿತ್ವಕ್ಕಾಗಿ ರಾಜಕಾಣ ಮಾಡಿದೆಯೇ ವಿನಃ ದೇಶದ ಅಭಿವೃದ್ಧಿ, ಬಡವರ ಕಾಳಜಿಗಾಗಿ ರಾಜಕಾರಣ ಮಾಡಿಲ್ಲ ಎಂದು ಛೇಡಿಸಿದರು.ನರೇಂದ್ರ ಮೋದಿ ಜೀ ಪ್ರಧಾನಿಯಾಗಿ 10 ವರ್ಷದಲ್ಲೇ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ನೀಡುತ್ತಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆ ಜಾರಿಗೊಳಿಸಿದ್ದಾರೆ. ಕೇವಲ 10 ವರ್ಷದಲ್ಲಿ ಮೋದಿ ಜೀ ಇಷ್ಟೆಲ್ಲ ಸಾಧನೆ ಮಾಡಿದ್ದಾರೆ ಎಂದಾದರೆ, 60 ವರ್ಷ ದೇಶ ಆಳಿದ ಕಾಂಗ್ರೆಸ್ಗೆ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಅವರು, ಮೋದಿ ಜೀ ತಂದಿರುವ ಹಲವಾರು ಸುಧಾರಣೆಗಳಿಂದ ದೇಶದ 25 ಕೋಟಿ ಜನ ಹಲವು ಆಯಾಮಗಳ ಬಡತನದಿಂದ ಹೊರ ಬಂದಿದ್ದಾರೆ ಎಂದರು