ದಾವಣಗೆರೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ; ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್


ಸಂಜೆವಾಣಿ ವಾರ್ತೆ
ದಾವಣಗೆರೆ. ಮೇ.8; ದಾವಣಗೆರೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ.ಬೆಳಗ್ಗೆ ೭ ಗಂಟೆಯಿಂದಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ಪ್ರಾರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಡಾ.ಎಂ.ವಿ ವೆಂಕಟೇಶ್ ತಿಳಿಸಿದರು.ನಗರದ ಬಕ್ಕೇಶ್ವರ ಪ್ರೌಢಶಾಲೆಯಲ್ಲಿ ಮತದಾನ ಮಾಡಿ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಬೆಳಗ್ಗೆ ೯ ಗಂಟೆ ವೇಳೆಗೆ ಶೇ ೯.೩೫ ರಷ್ಟು ಮತದಾನವಾಗಿದೆ.ಮತದಾರರು‌ ಕೂಡ ಉತ್ಸಾಹದಿಂದ ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ.ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಾಗಲಿದೆ.ಎಲ್ಲರೂ ಕೂಡ ಮತದಾನ ಮಾಡಬೇಕು ಎಂದರು.ಜಿಲ್ಲೆಯಲ್ಲಿ ಪೂರ್ಣಪ್ರಮಾಣದಲ್ಲಿ ಶಾಂತಿಯುತ ವಾತಾವರಣವಿದೆ.ಮುಕ್ತ ಮತ್ತು ನ್ಯಾಯಸಮ್ಮತವಾಗಿ ಮತದಾನ ಮಾಡಬೇಕು.ಬೆಳಗ್ಗೆ ೬.೩೦ ಕ್ಕೆ ಕೆಲವು ಕಡೆ ಕಂಟ್ರೋಲ್ ಯೂನಿಟ್ ನಲ್ಲಿ ಬಟನ್ ಕೆಲಸ ಮಾಡುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಬಂದಿತ್ತು.ಅಂದಾಜು ೫ ಕಂಟ್ರೋಲ್ ಯೂನಿಟ್ ಹಾಗೂ‌ ೩ ಬ್ಯಾಲೆಟ್ ಯೂನಿಟ್ ಗಳನ್ನು ಬದಲಾವಣೆ ಮಾಡಲಾಗಿದೆ.ಕೆಲ ವಿವಿಪ್ಯಾಟ್ ಯಂತ್ರದಲ್ಲಿ ದೋಷ ಕಂಡು ಬಂದಿತ್ತು.ಅದನ್ನೂ ಕೂಡ ಬದಲಾವಣೆ ಮಾಡಲಾಗಿದೆ.ಹೆಚ್ಚಿನ ಪ್ರಮಾಣದಲ್ಲಿ ಯಾವ ಬದಲಾವಣೆಯಾಗಿಲ್ಲ ಎಂದು ಮಾಹಿತಿ ನೀಡಿದರು. ಮತದಾನ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನಾ ಎಲ್ಲಾ ತಪಾಸಣೆ ಮಾಡಿ ತಾಂತ್ರಿಕದೋಷಗಳನ್ನು ಸರಿಪಡಿಸಿದ್ದೇವೆ ಎಂದರು.ದಾವಣಗೆರೆ ತಾಲ್ಲೂಕು ಹಾಗೂ ಚನ್ನಗಿರಿ, ಮಾಯಕೊಂಡದ ಕೆಲವೆಡೆ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಗ್ರಾಮಸ್ಥರು ಹೇಳಿದ್ದರು ಇದೀಗ ಅಧಿಕಾರಿಗಳು ಅವರ ಮನವೊಲಿಸಿ ಮತದಾನ ಮಾಡುವಂತೆ ತಿಳಿಸಿದ್ದಾರೆ ಈಬಾರಿ ಶೇ ೮೦ ಕ್ಕಿಂತ ಹೆಚ್ಚು ಮತದಾನವಾಗುವ ನಿರೀಕ್ಷೆ ನಮಗಿದೆ ಎಂದರು.ಪ್ರತಿಯೊಬ್ಬ ನಾಗರೀಕರು ತಮ್ಮ‌ಮತ ಚಲಾಯಿಸಬೇಕು ನಾನು ಕೂಡ ನನ್ನ ಹಕ್ಕು ಚಲಾಯಿಸಿದ್ದೇನೆ ಎಂದರು.