ದಾವಣಗೆರೆ ಜಿಲ್ಲಾ ಕ್ಷತ್ರಿಯ ಮುಖಂಡರ ಸಭೆ

ದಾವಣಗೆರೆ.ಫೆ.೨೭; ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಕ್ಷತ್ರಿಯ ಸಮಾಜ ಹಿನ್ನಡೆ ಕಾಣಲು ರಾಜಕೀಯವಾಗಿ ಬಲಾಢ್ಯರಾಗಿಲ್ಲ. ಜೊತೆಗೆ ನಮ್ಮ ಸಮಾಜ ಪಂಗಡಗಳಾಗಿ ವಿಂಗಡಣೆಯಾಗುವ ಬದಲಿಗೆ ಒಗ್ಗೂಡಿ ನಮ್ಮ ಸಂಖ್ಯಾಬಲದ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಸಮಾಜದ ಮುಖಂಡರು, ಬಾಂಧವರಿಗೆ ತಿಳಿಸಿದರು.ಅವರು, ಇಂದು ನಗರದ ಅಶೋಕ ರಸ್ತೆಯಲ್ಲಿರುವ ಶಾಂತಿ ಪಾರ್ಕ್ ನಲ್ಲಿ ಜಿಲ್ಲೆಯಲ್ಲಿರುವ ಕ್ಷತ್ರಿಯರ ಒಗ್ಗಟ್ಟು ಹಾಗೂ ಸಂಖ್ಯೆಗನುಗುಣವಾಗಿ ರಾಜಕೀಯ ಪಾಲುದಾರಿಕೆ ಹಿನ್ನೆಲೆ ಇಂದು ಜಿಲ್ಲಾ ಕ್ಷತ್ರಿಯ ಮುಖಂಡರ ಸಭೆಯಲ್ಲಿ ಮಾತನಾಡಿದರು.ಬಹುದೊಡ್ಡ ಪ್ರಮಾಣದಲ್ಲಿ ಪ್ರಸ್ತುತ ಕ್ಷತ್ರಿಯ ಸಮಾಜ ರಾಜಕೀಯ ಹಿನ್ನಡೆಯನ್ನ ಕಾಣುತ್ತದೆ. ಪರಿಣಾಮ ಯಾವುದೇ ರಂಗದಲ್ಲೂ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ರಾಜಕೀಯವಾಗಿ ಏಳಿಗೆಯನ್ನ ಕಾಣಬೇಕು ಎಂಬ ಚಿಂತನೆ ನಮ್ಮ ಸಮಾಜದಲ್ಲಿ ಮರೆಯಾಗಿದೆ. ಎಂಎಲ್ಎ, ಎಂಪಿ, ಎಂಎಲ್ಸಿ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಇವುಗಳಲ್ಲಿ ಕ್ಷತ್ರಿಯ ಸಮಾಜದವರಿಗೂ ರಾಜಕೀಯ ಸ್ಥಾನಮಾನ ನೀಡುತ್ತಾರೆಂದು 16 ವರ್ಷಗಳ ಕಾಲ ಬೇರೆಯವರನ್ನು ನಂಬಿ ಅವರ ಹಿಂದೆಯೇ ನಿಂತು ಸೇವೆಯನ್ನ ಮಾಡಿದಂತಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಐತಿಹಾಸಿಕ ನಾಯಕರಗಳ ಹೆಸರು ಹೇಳಿಕೊಳ್ಳುತ್ತಾ, ಅವರುಗಳ ಜಯಂತಿಯನ್ನು ಮಾಡುತ್ತೇವಷ್ಟೇ. ರಾಷ್ಟ್ರ, ರಾಜ್ಯ, ಅಂತರಾಷ್ಟ್ರ ಮಟ್ಟದಲ್ಲಿ ಶಿವಾಜಿ ಮಹಾರಾಜರ ಹೆಸರನ್ನು ಹೇಳುತ್ತೇವೆ. ಆದರೆ ಶಿವಾಜಿ ಮಹಾರಾಜರು ನಡೆದ ಮಾರ್ಗದಲ್ಲಿ ನಾವು ನಡೆಯುವಂತ ಪ್ರಯತ್ನ ಮಾಡಿದಾಗ ಅವರಂತೆ ಮಹಾರಾಜರಾಗಿ ನಮ್ಮ ಸಮಾಜ ಹಾಗೂ ಸಮಾಜ ಬಾಂಧವರು ಬೆಳೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.ಅಂತರಾಷ್ಟ್ರೀಯ ಮಟ್ಟದಲ್ಲಿ ಶಿವಾಜಿ ಮಹಾರಾಜರದಿದ್ದ ಕೌಶಲ್ಯ ಆಡಳಿತ ನೀತಿ ಬಗ್ಗೆ ಚರ್ಚೆಗಳಾಗಲಿವೆ ಅಲ್ಲದೆ, ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಇವುಗಳ ಬಗ್ಗೆ ಸಂಶೋಧನೆಗಳು ನಡೆಯಲಿದೆ. ನಮ್ಮ ದೇಶ ಒಂದು ಬಿಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಶಿವಾಜಿ  ಮಹಾರಾಜರ ಯುದ್ಧ ಕೌಶಲ್ಯ ಆಡಳಿತ ನೀತಿ, ರಣನೀತಿ ಇವುಗಳನ್ನು ಇವತ್ತಿಗೂ ವಿದೇಶಗಳಲ್ಲಿ ಸಂಶೋಧನೆ ಜೊತೆಗೆ ಅವುಗಳ ಪಾಲನೆ ಮಾಡಲಾಗುತ್ತಿದೆ ಎಂದರು.ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶಶಿಕುಮಾರ ಮೆಹರವಾಡೆ ಮಾತನಾಡಿ, ನಮ್ಮ ಸಮಾಜದ ಪ್ರಮುಖರು ಮುಖ್ಯವಾದ ವ್ಯಕ್ತಿಗಳಾಗಿದ್ದರು ಸಹ ನಮ್ಮ ಕೈಯಲ್ಲಿ ಅಧಿಕಾರ ಇಲ್ಲವಾಗಿದೆ. ಕಾರಣ ನಮ್ಮ ಸಮಾಜ ಬೇರೆಯವರ ಏಳಿಗೆಗಾಗಿ ಶ್ರಮಿಸುತ್ತಿದೆ ಹೊರತು ಕ್ಷತ್ರಿಯ ಸಮಾಜದ ಗುಣವನ್ನು ಅನುಸರಿಸುತ್ತಿಲ್ಲ. ನಮ್ಮ ಕ್ಷತ್ರಿಯ ಸಮಾಜದ ದೊಡ್ಡ ಸಂಖ್ಯೆಯನ್ನು ಬೇರೆ ಬೇರೆಯಾಗಿಸಿಕೊಂಡು ಸಣ್ಣ ಸಣ್ಣ ಪಂಗಡಗಳಾಗಿ ಮಾಡಿಕೊಂಡಿದ್ದೇವೆ. ನಾವೆಲ್ಲ ಕ್ಷತ್ರಿಯರು ಒಗ್ಗೂಡಿ ದೊಡ್ಡ ಸಂಖ್ಯೆಯಲ್ಲಿ ಹೊರಹೊಮ್ಮುವ ಕಾಲ ಇದೀಗ ಕೂಡಿಬಂದಿದೆ. ಕರ್ನಾಟಕದಲ್ಲಿ ಅತಿ ದೊಡ್ಡ ಸಂಖ್ಯೆ ಇರುವ ಜನಾಂಗವಿದ್ದರೆ ಅದು ನಮ್ಮ ಕ್ಷತ್ರಿಯ ಸಮಾಜ. ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ಇರುವ ಕಾರಣ ಕೈ ತಪ್ಪುವಂತಾಗಿದೆ. ಕ್ಷತ್ರಿಯ ಸಮಾಜದವರೆಲ್ಲರೂ ಒಗ್ಗಟ್ಟಾಗುವಂತ ಕಾಲ ಇದೀಗ ಬಂದಿದೆ. ನಮ್ಮ ಕ್ಷತ್ರಿಯ ಸಮಾಜದ ಮುಖಂಡರು ಪ್ರತಿಯೊಂದು ತಾಲೂಕಿನಲ್ಲಿ ಎಂಎಲ್ಎ ಆಗಬೇಕೆಂಬ ಕನಸು ಇದೆ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ರಾಜಕೀಯ ಸ್ಥಾನಮಾನ ಕಾಣದಂತಾಗಿದೆ. ಇದಕ್ಕೆ ಕ್ಷತ್ರಿಯ ಸಮಾಜ ಸಣ್ಣ ಸಣ್ಣ ಪಂಗಡಗಳಾಗಿ ವಿಂಗಡಣೆಯಾಗಿರುವುದೇ ಕಾರಣವಾಗಿದೆ ಎಂದರು.ಸಭೆಯಲ್ಲಿ ಮುಖಂಡರುಗಳಾದ ಸವಿತಾ ನಾಯ್ಕ, ಹನುಮಂತ ನಾಯ್ಕ, ನಾಮದೇವ ಸಿಂಪಿ ಸಮಾಜದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಐರಣಿ, ಜರಿಕಟ್ಟೆ ಹನುಮಂತಪ್ಪ, ಅನಿಲ್ ಕುಮಾರ್, ಶಂಕರ್, ರೂಪ ಕಾಟವೆ, ಎಸ್ ಎಸ್ ಕೆ ಸಮಾಜದ ಮುಖಂಡರಾದ ಅಂಬುಜಬಾಯಿ, ಕೌಶಲ್ಯ ಬಾಯಿ ರೂಕಡೆ, ಸುಧಾ ಸವಳಂಕಿ, ಮಂಜುನಾಥ್ ಪಿಸೆ, ರಶ್ಮಿ ಮೆಹರ್ವಾಡೆ, ಭಾರತಿ ದಿವಟೆ, ಚನ್ನಗಿರಿ ರಾಜಣ್ಣ, ರವಿ ನಾಯ್ಕ, ಮಂಜು ನಾಯ್ಕ, ಗಂಗಾಧರ್ ನಾಯ್ಕ, ವೆಂಕಟೇಶ್ ನಾಯ್ಕ, ನೇಕಾರ ಸಮಾಜದ ಮುಖಂಡರಾದ ಗೋಪಿ, ಶ್ರೀನಿವಾಸ್ ಇಂಡಿ, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ವಿಠಲ್, ನರೇಂದ್ರ, ಮಂಜುನಾಥ್ ಗಢಾಳೆ, ರಾಜು ರೂಕಡೆ, ನಾಗರಾಜ್ ಮೆಹರ್ವಾಡೆ, ಮೋಹನ್ ಶಿರೋಜಿ, ಮಂಜುನಾಥ್ ಸರ್ವೋದಯ ಸೇರಿದಂತೆ ಜಿಲ್ಲೆಯ ಕ್ಷತ್ರಿಯ ಸಮಾಜದ ಪ್ರಮುಖರು, ಮುಖಂಡರು ಇತರರು ಇದ್ದರು. ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡಾ ಆನಂದ್ ರಾಜ್ ಸ್ವಾಗತಿಸಿ ನಿರೂಪಿಸಿದರು.