ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ನಿಂದ ಮಹನೀಯರ ಸ್ಮರಣೆ


ದಾವಣಗೆರೆ.ನ.೧; ಜಿಲ್ಲಾ ಕಾಂಗ್ರೆಸ್‌ನಿಂದ ವಾಲ್ಮೀಕಿ ಜಯಂತಿ, ಸರ್ದಾರ್ ವಲ್ಲಭಬಾಯ್ ಜನ್ಮದಿನಾಚರಣೆ, ಇಂದಿರಾಗಾಂಧಿ ಪುಣ್ಯತಿಥಿಯನ್ನು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪನವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ನಂತರ ಮಾತನಾಡಿದ ಹೆಚ್.ಬಿ.ಮಂಜಪ್ಪನವರು ವಾಲ್ಮೀಕಿ ಮಹರ್ಷಿಗಳು ತಮ್ಮ ಮಹಾಕಾವ್ಯದ ಮೂಲಕ ರಾಮಾಯಣವನ್ನು ವಿಶ್ವಕ್ಕೆ ನೀಡಿದ್ದಲ್ಲದೇ ಪ್ರತಿಯೊಬ್ಬರು ರಾಮನಂತಹ ಆದರ್ಶಗಳನ್ನು ಪಾಲಿಸಬೇಕೆಂದು ತಿಳಿಸಿಕೊಟ್ಟಿದ್ದಾರೆ. ಆದರೆ ಬಿಜೆಪಿಯವರು ರಾಮ ನಮ್ಮವನು ಎನ್ನುತ್ತಾರೆ ವಿನಃ ರಾಮನನ್ನು ಪರಿಚಯಿಸಿದ ವಾಲ್ಮೀಕಿಯನ್ನು ಮರೆತಿದ್ದಾರೆ ಎಂದರು.
ಮಾಜಿ ಗೃಹಮಂತ್ರಿಗಳಾಗಿದ್ದ ದಿ.ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ದೇಶವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಲ್ಲದೇ ದೇಶ ವಿರೋಧಿ, ಒಂದು ಜಾತಿ-ಧರ್ಮದ ಸಂಘಟನೆಗಳನ್ನು ಬೆಂಬಲಿಸಲಿಲ್ಲ ಎಂದು ತಿಳಿಸಿದರು.ಮಾಜಿ ಪ್ರಧಾನಮಂತ್ರಿಗಳಾದ ದಿ. ಇಂದಿರಾಗಾಂಧಿಯವರು ದೇಶದ ಬಡತನ ನಿರ್ಮೂಲನೆಗಾಗಿ ೨೦ ಅಂಶಗಳ ಕಾರ್‍ಯಕ್ರಮವನ್ನು ತರುವ ಮೂಲಕ ಈ ದೇಶದ ಎಲ್ಲಾ ವರ್ಗಗಳಿಗೆ ಅನುಕೂಲ ಮಾಡಿಕೊಟ್ಟು ಅವರ ಆಡಳಿತವನ್ನು ವಿಪಕ್ಷಗಳು ಹೊಗಳುವಂತೆ ಮಾಡಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಎಸ್.ಟಿ.ಘಟಕದ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಕೆ.ಹೆಚ್.ಓಬಳಪ್ಪ ಮಾತನಾಡಿ ಈ ಜಗತ್ತಿಗೆ ರಾಮನನ್ನು ರಾಮಾಯಣದ ಮೂಲಕ ಪರಿಚಯಿಸಿದ್ದು ಮಹರ್ಷಿ ವಾಲ್ಮೀಕಿಯವರು. ರಾಮನು ನಮ್ಮನೆನ್ನುವ ಬಿಜೆಪಿಯವರು ನಿಜವಾಗಿಯೂ ರಾಮನ ಭಕ್ತರಾಗಿದ್ದರೆ ಆಯೋಧ್ಯಯಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪಿಸಲಿ ಎಂದು ಆಗ್ರಹಿಸಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಕೆ.ಪರಶುರಾಮ್ ಮಾಗಾನಹಳ್ಳಿ ಮಾತನಾಡಿ ಬೇಡನಾಗಿ ಹುಟ್ಟಿದ ವಾಲ್ಮೀಕಿ ತನ್ನ ಸಾಧನೆ ಮೂಲಕ ಮಹರ್ಷಿ ಆದವರು. ಅವರಿಂದಾಗಿ ಜಗತ್ತಿಗೆ ರಾಮ ಗೊತ್ತಾಯಿತು. ಇದನ್ನು ಸಂಪೂರ್ಣವಾಗಿ ಅರಿತಿದ್ದ ಮಹಾತ್ಮಗಾಂಧಿಯವರು ರಾಮನ ಭಕ್ತರಾಗಿ ವಾಲ್ಮೀಕಿ ಮಹರ್ಷಿಗಳು ರಚಿಸಿದ ಮಹಾಕಾವ್ಯವನ್ನು ಓದಲು ಹೇಳಿ ಅದರಲ್ಲಿ ಆದರ್ಶವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದರು ಎಂದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ಅವರು ಮಾತನಾಡಿ ರಾಮನನ್ನು ವಾಲ್ಮೀಕಿ ಮಹರ್ಷಿಗಳು ಈ ಜಗತ್ತಿಗೆ ಪರಿಚಯಿಸಿದವರು ಆದರೆ ವಾಲ್ಮೀಕಿ ಮಹರ್ಷಿಗಳನ್ನೇ ಮರೆತ ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಮ ಜನ್ಮಭೂಮಿ ಗಲಾಟೆ ವೇಳೆ ನಮ್ಮ ಸಹೋದರನು ಸಹ ಪ್ರಾಣತ್ಯಾಗ ಮಾಡಿದ ಆದರೆ ನಾವು ಎಂದು ಸಹ ದೇವರ ವಿಷಯದಲ್ಲಿ ರಾಜಕೀಯ ಮಾಡಲಿಲ್ಲ ಎಂದರು.
ಕಾರ್‍ಯಕ್ರಮಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯರು, ಮಾಜಿ ಶಾಸಕರುಗಳಾದ ಕೆ.ಮಲ್ಲಪ್ಪ ಮತ್ತು ಡಾ. ವೈ.ನಾಗಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ೨ ನಿಮಿಷಗಳ ಮೌನಾಚರಿಸಲಾಯಿತು.
ಇದೇ ವೇಳೆ ಕಳೆದ ೨೮ರಂದು ನಡೆದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮುಂಚೂಣ ಯಲ್ಲಿ ಕಾರ್‍ಯನಿರ್ವಹಿಸಿದ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ದಿನೇಶ್ ಕೆ.ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ದೇವರಮನಿ ಶಿವಕುಮಾರ್, ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಪಾಮೇನಹಳ್ಳಿ ನಾಗರಾಜ್, ಮೈನುದ್ದೀನ್ ಮತ್ತಿತರರಿದ್ದರು.
ಪೋಟೋ-೧