ದಾವಣಗೆರೆ ಎಜುಕೇಷನ್ ಎಕ್ಸ್ ಪೋ -2023*

*ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ; ಇದು ಪವಿತ್ರವಾದುದು.  ಜ್ಞಾನ ಮಾರ್ಗವನ್ನು  ಹಿಡಿದು ನಡೆ, ಕಾಲ ಪರಿಪಕ್ವತೆಯಾದಾಗ  ನೀನು  ಸಿದ್ಧಿಯನ್ನು  ಪಡೆದೇ  ಪಡೆಯುತ್ತೀಯಾ* – ಎಂಬುದಾಗಿ ನಮ್ಮ  ಪವಿತ್ರ  ಸಂಹಿತೆಗಳಲ್ಲಿ   ಹೇಳಲಾಗಿರುವ ಈ ಅಣಿಮುತ್ತು,  ಜ್ಞಾನದ ಮಹತ್ವವನ್ನು  ಸಾರಿ ಹೇಳುತ್ತದೆ.    ಜ್ಞಾನ ಬಹುಮುಖಿಯಾದುದು ; ಇದು ಹಲವಾರು ದಿಕ್ಕುಗಳಲ್ಲಿ ಚಲನಶೀಲತೆಯನ್ನು ಪಡೆದುಕೊಂಡಿರುತ್ತದೆ. ಇಂತಲ್ಲಿ ಕಲಿಯುವ ಮಕ್ಕಳ  ಜ್ಞಾನ, ಪ್ರತಿಭೆ, ಸಾಮರ್ಥ್ಯ, ಆಸಕ್ತಿಗಳನ್ನು ಗುರುತಿಸಿ ಆಯಾ ದಿಕ್ಕಿಗೆ ಸರಿಯಾಗಿ ಮಕ್ಕಳನ್ನು ಕೊಂಡೊಯ್ದು ಪ್ರೋತ್ಸಾಹಿಸಿ ಅವಕಾಶಗಳನ್ನು  ಸದುಪಯೋಗ ಮಾಡಿಕೊಳ್ಳುವಂತೆ ಮಾಡುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬ ಪ್ರಜೆಯದು. ದೇಶಕಟ್ಟಲು  ಇರಬೇಕಾದ ಪ್ರಾಥಮಿಕ  ತೊಟ್ಟಿಲ ಕಾಳಜಿ- ಮಕ್ಕಳ ಶೈಕ್ಷಣಿಕ ಅಭಿರುಚಿ ಅರಿತು ಪ್ರೋತ್ಸಾಹ ಮಾಡಿ ವಿಕಾಸಕ್ಕೆ ವಿಪುಲ ಜ್ಞಾನದ  ಪ್ರಾಯೋಗಿಕ ಅವಕಾಶಗಳನ್ನು ವ್ಯವಸ್ಥೆ ಮಾಡಿಕೊಡುವುದೇ ಆಗಿದೆ. ಇಂತಲ್ಲಿ ಒಬ್ಬ ಪ್ರಜ್ಞಾವಂತ ಪ್ರಜೆ,,,,ಪೋಷಕ, ಶಿಕ್ಷಕ, ಚಿಂತಕ, ಹಿತೈಷಿ, ಅಧಿಕಾರಿ, ನಾಗರೀಕ,  ರಾಜಕಾರಣಿ   ಯಾವುದೇ ಕೌಟುಂಬಿಕ/ ಸಾಮಾಜಿಕ   ಪಾತ್ರ ಸಂಬಂಧದಲ್ಲಿದ್ದರೂ   ಸಮಾಜದ ಮಕ್ಕಳ ಜ್ಞಾನಾಸಕ್ತಿಗಳನ್ನು ಅರಿತು ತನ್ನಿಂದಾಗಬಹುದಾದ ಸಹಕಾರ ನೀಡಿ ಮಕ್ಕಳ  ಭವಿಷ್ಯವನ್ನು  ವೃತ್ತಿಪರ ಕಾಳಜಿಯಿಂದ ಬೆಳಗಿಸಬೇಕಾದುದು  ಇಂದು  ತುಂಬ ಅನಿವಾರ್ಯ ಅವಶ್ಯಕತೆಯಾಗಿದೆ.ಇಂದು ನಮ್ಮ ಭಾರತ ದೇಶ ಏಕೆ!? ಇಡೀ ವಿಶ್ವವೇ ಜ್ಞಾನದ ಕಣಜವಾಗಿದೆ. ಅಲ್ಲಿ ಸಂಸ್ಕೃತಿ, ನಾಗರೀಕತೆಯೂ ಅನನ್ಯವಾಗಿ ಬೆರೆತಿದೆ. ಆದರೆ ಎಲ್ಲ ಜ್ಞಾನ ಸಂಪತ್ತು ಇದ್ದರೂ ನಮ್ಮ ಜಗತ್ತಾಗಲೀ, ದೇಶವಾಗಲೀ,ನಾಡಾಗಲಿ, ನಾವು ನಿಂತ ಸೂರಾಗಲಿ ಸೋಲುತ್ತಿವೆ ಏಕೆಂದರೆ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯನ್ನು ಅರಿತು ನಮ್ಮ ಕಿರಿಯರ/ಮಕ್ಕಳ  ಮನಸ್ಸುಗಳ ಜ್ಞಾನಾಪೇಕ್ಷೆಗಳನ್ನು , ವೃತ್ತಿ  ಸಾಮರ್ಥ್ಯ ಆಸಕ್ತಿಗಳನ್ನು   ಕಾಣುವಲ್ಲಿ  ಗಮನಿಸುವಲ್ಲಿ  ನೀರೆರೆದು ಹಿರಿಯರಾದ ನಾವೆಲ್ಲ  ಪೋಷಿಸುವಲ್ಲಿ  ಖಂಡಿತ ಸೋಲುತಿದ್ದೇವೆ. ಮಕ್ಕಳತ್ತ ಚಿತ್ತ ಕೊಡಲು ನಮಗೆ ಪುರುಸೊತ್ತಿಲ್ಲ! ಎಂಬುದು ಒಂದು ಬಾಹ್ಯಮುಖವಾದರೆ ಒಳಮುಖಿ  ಅಹಂಭಾವ- ನಾವು ಹೇಳಿದ್ದನ್ನೇ  ಮಕ್ಕಳು  ಕೇಳಿ ನಡೆಯಬೇಕು , ಪಡೆಯಬೇಕು, ಮಾಡಬೇಕೆಂಬ ಹುಂಬತನ;  ಅತಿ ಪ್ರೀತಿಯ ಮೋಹ, ರೂಢೀಗತ ಮನೋಭಾವಗಳು   ಮಕ್ಕಳ ವಿಕಾಸಕ್ಕೆ ತುಂಬ ತೊಡಕಾಗಿವೆ. ನಮ್ಮ ಮಕ್ಕಳು ಅಕ್ಕ ಪಕ್ಕದ ಮನೆಯ ಮಕ್ಕಳಂತೆ ಅಂಕಗಳಿಸಿ, ರ್ಯಾಂಕ್ ಪಡೆಯಬೇಕು; ಇಂಜಿನಿಯರ್ ಡಾಕ್ಟರ್ ಐಎಎಸ್ ,ಐಪಿಎಸ್ ಆಗಬೇಕು- ಎಂಬ ಒಂದೇ ಮಂತ್ರ ಪಠಣೆಯ ಅಂಕ ಪದವಿ ಗಳಿಕೆಯ ನಾಗಾಲೋಟದಲ್ಲಿ , ಮಕ್ಕಳನ್ನು ಅವರ ಅಪೇಕ್ಷೆಯ ದಾರಿಯಲ್ಲಿ ನಡೆಯಲು ಬಿಡದೆ ತಮ್ಮಂತೆ ಬೆಳೆಸಬೇಕು; ಬಾಳಿಸಬೇಕೆಂಬ ಸ್ವಾರ್ಥ ಪ್ರತಿಷ್ಠೆಯ  ಮನೋಭಾವದಲ್ಲೋ   ಅಥವಾ  ತುಂಬು ವ್ಯಾಮೋಹದ  ಕಾಳಜಿಯಲ್ಲೋ,  ಜಾಗತೀಕರಣದ ಭ್ರಮೆಯಲ್ಲೋ, ತಾನು ಪಟ್ಟಂತೆ  ಕಷ್ಠವನ್ನು   ಮಕ್ಕಳು ಪಡದಿರಲೆಂದು ಹೀಗೆ ನೀನು ಆಗಬೇಕೆಂದು  ಮಕ್ಕಳನ್ನು ಬಲವಂತ ಮಾಡುವ ಪೋಷಕರು, ಅದನ್ನೇ ಗೌರವವೆಂದು  ನಿರೀಕ್ಷೆ    ಮಾಡುತ್ತಿರುವ ಸಮಾಜ ಒಂದು  ಕಡೆಯಾದರೆ;   ಮತ್ತೊಂದು ಕಡೆ  ಎಲ್ಲಾ ಸಾಮರ್ಥ್ಯ  ಇದ್ದರೂ ಮಾರ್ಗದರ್ಶನ ಹಾಗೂ ಆರ್ಥಿಕ  ಸವಲತ್ತಿನ   ಕೊರತೆಯಿಂದ  ಅವಕಾಶ ವಂಚಿತರಾಗುತ್ತಿರುವ   ಮಕ್ಕಳು-  ಅವರ ಹತಾಶೆ, ನಿರಾಸೆ, ಮನೋರೋಗಗಳ ಉಲ್ಬಣ,  ಪೋಷಕರ ಬಡತನ,  ಅಜ್ಞಾನ ,  ತಿಳಿವಿನ ಕೊರತೆ,,,,  ಕೆಲವೊಮ್ಮೆ ಎಲ್ಲ ಇದ್ದು, ಮಕ್ಕಳು ಏನೂ ಆಗಲಾರದೆ  ಅಷ್ಟೇ ಏಕೆ!?  ಕೆಲವು ಮಕ್ಕಳು  ದುರಭ್ಯಾಸಗಳಿಗೆ ಒಳಗಾಗಿ, ದುರ್ಬಲತೆಯಿಂದ   ಜೀವನಪ್ರೀತಿಯನ್ನೇ  ಕಳೆದುಕೊಳ್ಳುತ್ತಿರುವ   ಮಕ್ಕಳಿಗೆ ಅವರವರ  ಆಸಕ್ತಿ ಸಾಮರ್ಥ್ಯ ಅರಿತು  ಜ್ಞಾನ ಕಲಿಸುವ; ಅವರ ಭವಿಷ್ಯದ ಬದುಕಿಗೆ ವೃತ್ತಿ ಮಾರ್ಗದರ್ಶನ   ಮಾಡುವ ; ಅವರಲ್ಲಿ  ಬದುಕಿನ  ಬಗ್ಗೆ  ಭರವಸೆ  ತುಂಬುವ ನಿಟ್ಟಿನಲ್ಲಿ   ಒಂದಿಷ್ಟು  ಕಾಯಕಯೋಗ ಮಾಡಿ, ಮಕ್ಕಳ  ಮಾನಸಿಕ, ಸಾಮಾಜಿಕ  ಜೀವನದ  ಆರೋಗ್ಯ   ಕಾಪಾಡುವುದು ಇಂದು ನಮ್ಮೆಲ್ಲರ  ಜವಾಬ್ದಾರಿಯೇ  ಆಗಿದೆ. ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಪ್ರೌಢಾವಸ್ಥೆ ಮಹತ್ತರವಾದ  ಘಟ್ಟವಾಗಿದೆ. ಇಲ್ಲಿ ಮಕ್ಕಳ ಸಾಮರ್ಥ್ಯ, ಪ್ರತಿಭೆ, ವೃತ್ತಿ ಆಕಾಂಕ್ಷೆ  ಅರಿಯುವುದು ಬಹಳ ಮುಖ್ಯವಾಗಿದೆ. ದೇಶದ ವಿಕಾಸ ನಿಂತಿರುವುದೇ ತರಗತಿ ಕೋಣೆಯ ಮಕ್ಕಳಲ್ಲಿ. ಅಂತಹ ಮಕ್ಕಳಿಗೆ ಸರಿಯಾದ ಪೋಷಣೆ,  ಪ್ರೋತ್ಸಾಹ, ಅವಕಾಶಗಳನ್ನು ನಮ್ಮ ಸರ್ಕಾರ, ವೈವಿಧ್ಯಮಯ ಇಲಾಖೆ- ಸಂಘಸಂಸ್ಥೆಗಳು  ಬಹಳವಾಗಿ ನೀಡಿವೆ ಆದರೆ ಅವುಗಳನ್ನು ಮಕ್ಕಳಿಗೆ ಮಾರ್ಗದರ್ಶನವಾಗಿ ನೀಡುವಲ್ಲಿ ನಾವೆಲ್ಲಾ ಮುಂದಾಗಬೇಕಿದೆ. ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ನಂತರ  ನಾನು ಏನನ್ನು ಓದಬೇಕು? ಏನನ್ನು ಕಲಿಯಬೇಕು? ನನ್ನ ಆಸಕ್ತಿ ವಿಷಯ ಕಲಿಕೆಗಳಿಗೆ ವ್ಯವಸ್ಥೆ ಅವಕಾಶಗಳ ಲಭ್ಯತೆ ಹೇಗೆ? ಆರ್ಥಿಕ ಕುಂದುಕೊರತೆಗಳಿಗೆ ಪರಿಹಾರ ಎಲ್ಲಿ ಹೇಗೆ ಪಡೆಯಬೇಕು!?  ಎಂಬ ನೂರಾರು ಗೊಂದಲಗಳು ಇರುತ್ತವೆ. ಆ ಗೊಂದಲಗಳನ್ನು ಒಂದೇ ವೇದಿಕೆಯಲ್ಲಿ ನೂರಾರು ಆಯಾಮಗಳ ಪರಿಕಲ್ಪನೆ ಸ್ವರೂಪ ಯೋಜನೆಗಳ  ಪ್ರಾತ್ಯಕ್ಷಿಕತೆಯಲ್ಲಿ  ಪರಿಹರಿಸಲು ದಾವಣಗೆರೆ  ದಕ್ಷಿಣ ವಲಯದ ಕ್ಷೇತ್ರ  ಶಿಕ್ಷಣಾಧಿಕಾರಿಗಳಾದ  . ದಾರುಕೇಶ್  ಸಂಕಲ್ಪಿಸಿ ಯೋಜಿಸಿ ಸಹೃದಯರನ್ನು  ಸಂಘಟಿಸಿ,  ಸಮಾಜದ ಎಲ್ಲ  ಕ್ಷೇತ್ರದ  ಅನುಭವಿ ಹಿರಿಯರು ಗಣ್ಯರನ್ನು   ಖುದ್ದು  ಭೇಟಿ ಮಾಡಿ  ಮಹತ್ತರ  ಆಶಯ ಭಾವದಿಂದ  ಮಾಡುತ್ತಿರುವ  ಉನ್ನತ  ಶಿಕ್ಷಣ ಹಾಗೂ ಉದ್ಯೋಗ ಕಾರ್ಯಾಗಾರ,,,,,ಎಜುಕೇಷನ್ ಎಕ್ಸ್ ಪೋ-2023 ಕಾರ್ಯಕ್ರಮ. ದಾವಣಗೆರೆ ದಕ್ಷಿಣ ವಲಯ ತಾಲ್ಲೂಕಿನ ಕ್ಷೇತ್ರ  ಶಿಕ್ಷಣಾಧಿಕಾರಿಗಳ  ಕಾರ್ಯಾಲಯವು  ದಾವಣಗೆರೆ  ದಕ್ಷಿಣ ವಲಯ ತಾಲ್ಲೂಕಿನ ಎಲ್ಲ ಅನುದಾನಿತ/ ಅನುದಾನರಹಿತ/ ಸರ್ಕಾರಿ- ಪ್ರೌಢಶಾಲೆಗಳ  ಶಿಕ್ಷಕರ ಸಂಘ ಮತ್ತು ಮುಖ್ಯ ಶಿಕ್ಷಕರ  ಸಂಘಗಳ  ಸಹಯೋಗದಲ್ಲಿ   ಮಾ: 20 ರ  ಬೆಳಿಗ್ಗೆ 10-30 ರಿಂದ ಸಂಜೆಯ 5 ರ ತನಕ  ದಾವಣಗೆರೆಯ  ಬಾಪೂಜಿ ಸಮುದಾಯ ಭವನ ದಲ್ಲಿ  ನಡೆಯಲಿರುವ   ಎಜುಕೇಷನ್ ಎಕ್ಸ್ ಪೋ  ಕಾರ್ಯಕ್ರಮ ಸಾಮಾಜಿಕ ಮಕ್ಕಳ  ಭವಿಷ್ಯದ  ವೃತ್ತಿ ಬದುಕನ್ನು  ಬೆಳಗುವ  ಅನನ್ಯ   ಆಚರಣೆಯ ಯೋಗವೇ  ಆಗಿದೆ  ಎಂದರೆ,  ಇದರಲ್ಲಿ  ಅತಿಶಯೋಕ್ತಿಯಿಲ್ಲ. ಎಜುಕೇಷನ್ ಎಕ್ಸ್ ಪೋ -2023 ಈ ಶೈಕ್ಷಣಿಕ ಮೇಳದಲ್ಲಿ ಎಸ್ಸೆಸ್ಸೆಲ್ಸಿ ನಂತರ ಮುಂದೆ ಏನು!!!!!?????  ಹೇಗೆ!!!!!!????? ಎಂಬಂತಹ ಲಕ್ಷಾಂತರ ಮಕ್ಕಳ, ಪೋಷಕರ ಗೊಂದಲ ತಳಮಳಗಳಿಗೆ ಮಾರ್ಗದರ್ಶನಾತ್ಮಕ  ಸಮಾಧಾನಕರವಾದ  ಉತ್ತರ   ಸಿಗುವಂತೆ  ಪೂರಕ ವಿಷಯ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ. ವೃತ್ತಿ/ಉದ್ಯೋಗ  ಮಾರ್ಗದರ್ಶನದ ಕಾರ್ಯಾಗಾರವೇ  ಆಗಿರುವ ಈ ಕಾರ್ಯಕ್ರಮದಲ್ಲಿ  ,,,,,,, ಪದವಿ ಪೂರ್ವ ಶಿಕ್ಷಣದ ಸ್ವರೂಪ  / ಲಭ್ಯ ಕೋರ್ಸುಗಳು / ವಿಧಗಳು;  ಪಿಯುಸಿ ಹೊರತಾಗಿ ಇರುವ ವೃತ್ತಿ ಕೌಶಲ ಶಿಕ್ಷಣ- ತರಬೇತಿಗಳು; ಅವುಗಳಿಗೆ ಸಂಬಂಧಿಸಿದ ಶುಲ್ಕಗಳು; ಉಚಿತ ಹಾಸ್ಟೆಲ್ ಸೌಕರ್ಯಗಳು; ವಿದ್ಯಾರ್ಥಿ ವೇತನಗಳು ;  ಎಸ್ಸೆಸ್ಸೆಲ್ಸಿ ನಂತರ ತರಬೇತಿ ಪಡೆದು  ಮಾಡಬಹುದಾದ ಉದ್ಯೋಗಗಳು; ವಿದ್ಯಾರ್ಥಿಗಳ ಶೈಕ್ಷಣಿಕ ಕಾಳಜಿಗಾಗಿ ಇರುವಂತಹ  ಬ್ಯಾಂಕ್ ಲೋನ್ ಗಳು ಇತರ ಸವಲತ್ತುಗಳು; ಸರ್ಕಾರ ಒದಗಿಸುತ್ತಿರುವ ಸವಲತ್ತುಗಳು;  ಉನ್ನತ ಶಿಕ್ಷಣಕ್ಕಾಗಿ ಇರುವ ಸರ್ಕಾರದ ಸಹಕಾರ ಯೋಜನೆಗಳು; ಸ್ಪರ್ಧಾತ್ಮಕ ಪರೀಕ್ಷೆಗಳು; ಅಗ್ನಿಪಥ್  ಅಂತಹ ಕೇಂದ್ರ  ಸರ್ಕಾರದ   ಯೋಜನೆಗಳು;  ಫ್ಯಾಷನ್  ಡಿಸೈನಿಂಗ್ ಇನ್ನಿತರ ಕೌಶಲ್ಯಪೂರ್ಣ ತರಬೇತಿಗಳು- ಇಂತಹ ಹಲವಾರು ವಿಷಯಗಳ ಬಗ್ಗೆ   ಮಾಹಿತಿಯನ್ನು ಅಮೂಲಾಗ್ರವಾಗಿ  ಪರಿಣಿತರಿಂದ, ತಜ್ಞರಿಂದ, ಅನುಭವಿಕರಿಂದ ಒದಗಿಸಲಾಗುತ್ತಿದೆ. ಅಷ್ಟೇ ಅಲ್ಲದೆ,, ಆಸಕ್ತಿಯುತ  ಗುಡಿ ಕೈಗಾರಿಕೆಗಳ ಬಗ್ಗೆ  ಜೀವಂತಿಕೆಯ  ಪ್ರದರ್ಶನ ಕೂಡ ಏರ್ಪಡಿಸಲಾಗುತ್ತಿದೆ. ಆ ಮೂಲಕ ಅವುಗಳಿಗೆ ಬೇಕಾಗುವ ಬಂಡವಾಳ, ಸಾಮಗ್ರಿ-ಪದಾರ್ಥಗಳ ಲಭ್ಯತೆ, ಸಾಧಕ ಬಾಧಕಗಳ ಬಗ್ಗೆ ಮುಕ್ತ ಚರ್ಚೆಯನ್ನು ಮಾಡಿ, ಆಸಕ್ತ ಮಕ್ಕಳು  ಸ್ವಯಂ ಉದ್ಯೋಗಗಳಲ್ಲಿ   ತೊಡಗಲು ಪ್ರೇರೇಪಣೆ ಕೂಡ ಪಡೆಯುವಂತೆ ಕಾರ್ಯಕ್ರಮದ ಆಯೋಜನೆ  ಮಾಡಲಾಗುತ್ತಿದೆ. ನಮ್ಮ ದಾವಣಗೆರೆ ದಕ್ಷಿಣ ವಲಯದ ಬಿ. ಇ. ಓ.  ದಾರುಕೇಶ್  ತಮ್ಮ ಆಡಳಿತಾತ್ಮಕ ; ಶಾಲಾ ಭೇಟಿ; ಪರೀಕ್ಷಾ ಗಮನದಂತಹ ನೂರಾರು ಅಧಿಕಾರಿ  ಕಾರ್ಯಭಾರಗಳ ನಡುವೆಯೂ ಶಾಲಾ ಶಿಕ್ಷಣದ ಹಂತದಲ್ಲೇ  ಉನ್ನತ ಶಿಕ್ಷಣದ ಬಗ್ಗೆ ಮಕ್ಕಳಿಗೆ ತಿಳಿವು ಮೂಡಿಸಿ ಅವರ ಭವಿಷ್ಯ ಉಜ್ವಲಗೊಳಿಸುವಂತಹ  ದೂರದೃಷ್ಟಿಯ  ಪ್ರಾಮಾಣಿಕ ಕಾಳಜಿಯನ್ನು  ಸೂಕ್ತ ಸಮಯದಲ್ಲಿ  ಈ ಕಾರ್ಯಕ್ರಮದ  ಮೂಲಕ ಮಾಡುತ್ತಿರುವುದು ನಿಜಕ್ಕೂ  ವಂದನೀಯ. ಇಲಾಖೆ, ಸಮಾಜ ಹಾಗೂ ಮಕ್ಕಳ ಮೇಲಿನ ಕಾಳಜಿಗಾಗಿ  ಶ್ರಮಿಸಿ, ಸಹಕರಿಸುತ್ತಿರುವ,,,,ದಾವಣಗೆರೆ ದಕ್ಷಿಣ ವಲಯದ   ಬಿ.ಆರ್.ಸಿ. ಗಳಾದ  . ಬಿ. ಎಂ.  ಚೌಡಪ್ಪನವರು , ಆಂಜನೇಯ ನಗರ ( ಹೊನ್ನಮರಡಿ) ಮಾರುತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ  ಕೆ. ಸಿ. ಶ್ರೀನಿವಾಸಮೂರ್ತಿ  ಮತ್ತು ಅವರ ತಂಡ,  ಶಿಕ್ಷಕರಾದ- ಎ. ಆರ್. ಮಂಜಪ್ಪ, ವಿರೂಪಾಕ್ಷಪ್ಪ ವಿ. ಮಂತ್ರೋಡಿ,, ವಿಜಯ್ ಕುಮಾರ್, ಹನುಮಂತಪ್ಪ ಜಿ., ರವಿಕುಮಾರ್, ಬಿರಾದಾರ್,  ಮೇಸ್ತ್ರಿ,  ಶಿಕ್ಷಕಿಯರಾದ- ಎನ್.ಆರ್. ನಳಿನ,  ಸೌಭಾಗ್ಯ, ಸುಜಾತ, ಶಕುಂತಲ,  ಮುಖ್ಯ ಶಿಕ್ಷಕರಾದ ಗೋವರ್ಧನ್  ಸರ್  ಮೊದಲಾಗಿ  ಹೆಸರಿಸಲಾಗದಷ್ಟು  ಪ್ರತ್ಯಕ್ಷ ಪರೋಕ್ಷ  ಸಹಕಾರ  ಸಹೃದಯತೆ  ತೋರುತ್ತಿರುವ; ಕಾರ್ಯಕ್ರಮದ  ಯಶಸ್ಸಿಗೆ   ಕೆಲಸ ಮಾಡುತ್ತಿರುವ  ಸೇವಾ ಮನೋಭಾವದ  ನಮ್ಮ   ಶಿಕ್ಷಣ  ಹಾಗೂ ಶಿಕ್ಷಣೇತರ ಇಲಾಖೆಯ  ಎಲ್ಲಾ   ಬಂಧುಗಳಿಗೂ   ಈ ಮೂಲಕ  ಹೃತ್ಪೂರ್ವಕ  ವಂದನೆಗಳನ್ನು  ಸಲ್ಲಿಸುತ್ತೇನೆ. 

ಲೇಖನ; ಶ್ರೀಮತಿ. ಎ. ಸಿ. ಶಶಿಕಲಾ ಶಂಕರಮೂರ್ತಿ,ಶಿಕ್ಷಕಿ, ಸಾಹಿತಿ, ದಾವಣಗೆರೆ.