ದಾವಣಗೆರೆ ಉತ್ತರ, ದಕ್ಷಿಣದಲ್ಲಿ ಗಾಯಿತ್ರಿ ಸಿದ್ದೇಶ್ವರ ಪರ ರ್ಯಾಲಿ ; ಸುರಕ್ಷಿತ ದೇಶಕ್ಕಾಗಿ ಮೋದಿ ಪ್ರಧಾನಿ ಆಗಬೇಕು

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.೪: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಪರ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೃಹತ್ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತದಾರರನ್ನು ಉದ್ದೇಶಿಸಿ ಮಾತನಾಡಿ, ದೇಶದ ಸುರಕ್ಷತೆ, ಪರಂಪರೆ, ಮುಂದಿನ ಪೀಳಿಗೆಗಾಗಿ ಭಾರತೀಯರಾದ ನಾವು, ಭಾರತಕ್ಕೊಸ್ಕರ ಬಿಜೆಪಿ ಬೆಂಬಲಿಸಬೇಕು. ಅಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು ಅಂದರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು. ನೀವೆಲ್ಲರೂ ಗಾಯಿತ್ರಿ ಸಿದ್ದೇಶ್ವರ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.ಕಳೆದ 20 ವರ್ಷದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ. ಅದಕ್ಕೆ ಸಂಸದರಾದ ಜಿ.ಎಂ.ಸಿದ್ದೇಶ್ವರ್. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಅನೇಕ ನಗರಗಳು ಸ್ಮಾರ್ಟ್ ಆಗಿವೆ. ಗ್ರಾಮೀಣ ಭಾಗಕ್ಕೆ ವಿದ್ಯುತ್, ಮನೆ ಮನೆಗೂ ಉಜ್ವಲ ಯೋಜನೆ ಅಡಿ ಸಿಲಿಂಡರ್, ರೈಲ್ವೆ ಉನ್ನತೀಕರಣ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಇಂತಹ ಪ್ರಧಾನಿಗಳು ನಮಗೆ ಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದರೆ ನಾವು ಗೆಲ್ಲಬೇಕು. ನಾವು ಗೆಲ್ಲಬೇಕು ಅಂದರೆ ನೀವೆಲ್ಲರೂ ಕಮಲದ ಗುರುತಿಗೆ ತಪ್ಪದೆ ಮತ ಹಾಕಬೇಕು, ಮತ ಹಾಕಿಸಬೇಕು ಎಂದು ಕರೆ ನೀಡಿದರು.ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಮೂಲಕ ದೇಶಕ್ಕೆ ಸುವರ್ಣ ಯುಗ ತರಲು ಕೆಲಸ ಮಾಡುತ್ತಿದ್ದಾರೆ. ಅವರ ದೂರದೃಷ್ಟಿ, ಅಭಿವೃದ್ಧಿಗೆ ನಾವು ಸೇತುವೆಯಾಗಿದ್ದೇವೆ. ಈ ಬಾರಿ ಗಾಯಿತ್ರಿ ಸಿದ್ದೇಶ್ವರ ಅವರ ಗೆದ್ದು ಮೋದಿ ಅವರ ಕನಸಿನ ಯೋಜನೆಗಳಿಗೆ ಸೇತುವೆಯಾಗಿ ಕೆಲಸ ಮಾಡಿ, ದಾವಣಗೆರೆ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಇಡೀ ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದು, ರಾಜ್ಯದಲ್ಲಿ 28 ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದರು.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಮಾತನಾಡಿ, ಮತದಾನಕ್ಕೆ ಇನ್ನೂ ಮೂರು ದಿನ ಬಾಕಿ ಇದೆ. ನಮ್ಮ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಾನು ಕೂಡ ಈಗಾಗಲೇ ಇಡೀ ಕ್ಷೇತ್ರ ಒಂದು ಸುತ್ತು ಸುತ್ತಿದ್ದೇನೆ. ಸಿದ್ದೇಶ್ವರ್ ಅವರು ಇಲ್ಲಿ ನೋಡದ ಹಳ್ಳಿಗಳಿಲ್ಲ, ಹೋಗದ ರಸ್ತೆಗಳಿಲ್ಲ. ಇಡೀ ಕ್ಷೇತ್ರದ  ಮತದಾರ ಪ್ರಭುಗಳು ನಮ್ಮ ಮೇಲೆ 6 ಬಾರಿ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಅವರ  ಆಶೀರ್ವಾದ ಸಿಗಲಿದೆ, ನಾನು ಗೆದ್ದು ಮೋದಿ ಜೀ ಅವರ ಕೈ ಬಲಪಡಿಸುತ್ತೇನೆ ಎಂಬ ವಿಶ್ವಾನ ಇದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.ಕಾಂಗ್ರೆಸ್ ಅಭ್ಯರ್ಥಿಯ ಪತಿ ಜಿಲ್ಲಾ ಉಸ್ತುವಾರಿ ಸಚಿವರಾದರೂ ದಕ್ಷಿಣ ಭಾಗಕ್ಕೆ ಒಂದು ಸುಸಜ್ಜಿತವಾದ ಆಸ್ಪತ್ರೆಗೆ, ವಿದ್ಯಾಕೇಂದ್ರ, ಕೈಗಾರಿಕೆ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಅಧಿಕಾರ ಇದ್ದಾಗ ಏನೂ ಮಾಡಲು ಆಗದವರು ಈ ಬಂದು ನಾನು ಅಭಿವೃದ್ಧಿ ಮಾಡುತ್ತೇನೆ, ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಿದ್ದಾರೆ. ಇದು ದಿನವೂ ಮನೆ, ಕಲ್ಲೇಶ್ವರ ಮಿಲ್ ಬಿಟ್ಟು ಹೊರಗೆ ಬಾರದವರಿಗೆ ಜಿಲ್ಲೆಯ ಸಮಸ್ಯೆ ಏನು ಗೊತ್ತು..? ಎಂದು ಪ್ರಶ್ನಿಸಿದರು.