ದಾವಣಗೆರೆಯಲ್ಲಿ ಹೊತ್ತಿ ಉರಿದ ಮಾರುತಿ ಕಾರು


ದಾವಣಗೆರೆ.ನ.೨೦: ತಾಲೂಕಿನ ಭಾತಿ ಡೈರಿ ಬಳಿ ಓಮ್ನಿ ಕಾರು ಹೊತ್ತಿ ಉರಿದ ಘಟನೆ ನಡೆದಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ. 
ಹರಿಹರ ಕಡೆಯಿಂದ ದಾವಣಗೆರೆ ಕಡೆಗೆ ಬರುತ್ತಿದ್ದ ಮಾರುತಿ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಕಾರಿನಿಂದ ಇಳಿದು ಹೋಗಿದ್ದು, ಕಾರಿನಲ್ಲಿ ಬೇರೆಯವರು ಇದ್ದರೋ ಇಲ್ಲವೋ ಎಂಬುದು ಗೊತ್ತಾಗಿಲ್ಲ. 
ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಧಗಧಗನೇ ಹೊತ್ತಿ ಉರಿಯಲಾರಂಭಿಸಿದೆ ಎಂದು ಹೇಳಲಾಗಿದೆ. ಓಮ್ನಿ ಕಾರು ಹೊತ್ತಿ ಉರಿದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಮಾತ್ರವಲ್ಲ, ಹರಿಹರ – ದಾವಣಗೆರೆ ಮುಖ್ಯ ರಸ್ತೆಯಲ್ಲಿಈ ಘಟನೆ ನಡೆದಿದ್ದು, ಜನರು ಹತ್ತಿರ ಹೋಗಲು ಹೆದರುವಂತ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯಲ್ಲಿ ಕಾರು ಹೊತ್ತಿ ಉರಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ಈ ರಸ್ತೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸದ್ಯಕ್ಕೆ ನಿಲ್ಲಿಸಲಾಗಿದೆ. ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು, ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.