ದಾವಣಗೆರೆಯಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ ಆಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೫: ಶ್ರಾವಣ ಮಾಸವೆಂದರೆ ಹಬ್ಬ ಹರಿದಿನಗಳ ಕಾಲ. ನಾಗರಪಂಚಮಿ ನಂತರ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ಪ್ರಮುಖವಾದದ್ದು. ಬದುಕಿನ ಸಮೃದ್ಧಿ, ಏಳ್ಗೆ, ವಿದ್ಯೆ, ಬುದ್ಧಿ ಎಲ್ಲವನ್ನೂ ಕೊಡುವ ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಪೌರ್ಣಮಿಗೆ ಮೊದಲು ಬರುವ ಶುಕ್ರವಾರ ಆಚರಿಸಲಾಗುತ್ತದೆ. ಮಹಿಳೆಯರು ಈ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ಆದಿಲಕ್ಷ್ಮಿ , ಧನಲಕ್ಷ್ಮಿ , ಧೈರ್ಯ ಲಕ್ಷ್ಮಿ , ಸೌಭಾಗ್ಯ ಲಕ್ಷ್ಮಿ , ವಿಜಯಲಕ್ಷ್ಮಿ , ಧಾನ್ಯಲಕ್ಷ್ಮಿ, ಸಂತಾನ ಲಕ್ಷ್ಮಿ , ವಿದ್ಯಾಲಕ್ಷ್ಮಿಯ ಕೃಪೆಗೆ ಪಾತ್ರವಾಗಲು ಈ ಹಬ್ಬವು ಪ್ರಮುಖವಾಗಿದೆ.ಒಟ್ಟಾರೆ ವರಮಹಾಲಕ್ಷ್ಮಿ ಹಬ್ಬವು ಹಿಂದೂ ಸಂಸ್ಕೃತಿಯಲ್ಲಿ ಮಂಗಳಕರ ಹಬ್ಬವಾಗಿದೆ.ಈ ಹಿನ್ನೆಯಲ್ಲಿ ದಾವಣಗೆರೆ ನಗರದಲ್ಲಿ ಮಹಿಳೆಯರು ಅತ್ಯಂತ ಸಡಗರ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡಿದ್ದು ಕಂಡುಬಂದಿತು.