ದಾವಣಗೆರೆಯಲ್ಲಿ ಶ್ರೀನಿವಾಸ ಕಲ್ಯಾಣದ ಸಂಭ್ರಮ

ಸಂಜೆವಾಣಿ ವಾರ್ತೆ

ದಾವಣಗೆರೆ. ಮಾ.೧೮; ಬೆಣ್ಣೆನಗರಿಯಲ್ಲಿ  ತಿರುಪತಿ ತಿಮ್ಮಪ್ಪನ ದೇಗುಲದ ವೈಭವ ಅನಾವರಣಗೊಂಡಿತ್ತು. ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಸಂಭ್ರಮ. ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಸಭಾಂಗಣ ಕಾಲಿಡಲೂ ಜಾಗವಿಲ್ಲದಂತೆ ತುಂಬಿ ತುಳುಕಿತು. ನೂರಾರು ಮಂದಿ ನಿಂತುಕೊಂಡೇ ವೀಕ್ಷಿಸಿದರು. ಕಣ್ಣು ಹಾಯಿಸಿದಲ್ಲೆಲ್ಲ ಜನವೋ ಜನ.ಗಣಪತಿ ಪೂಜೆಯೊಂದಿಗೆ ಕಲ್ಯಾಣೋತ್ಸವಕ್ಕೆ ಚಾಲನೆ ದೊರೆಯಿತು. ಸ್ವಾಮಿಗೆ ಮಂಗಳ ಸ್ನಾನ ಮಾಡಿಸಿ ಮಂಗಳಾರತಿ ಬೆಳಗಲಾಯಿತು. ಅಭಿಷೇಕ, ಪುಣ್ಯಾಹವಾಚನ, ಒರಳುಪೂಜೆ, ಬಳೆ ಕೊಡಿಸುವ ಶಾಸ್ತ್ರ, ಮಾಂಗಲ್ಯ  ಧಾರಣೆ ಎಲ್ಲವೂ ಶಾಸ್ತ್ರೋಕ್ತವಾಗಿ ನೆರವೇರಿದವು.ಸಭಾಂಗಣದಲ್ಲಿ ಗೋವಿಂದ ನಾಮ ಸ್ಮರಣೆ. ಹರೇ ಶ್ರೀನಿವಾಸ ಗುರೋ ರಾಘವೇಂದ್ರ, ಹರೇ ರಾಮ ಹರೇ ರಾಮ ಎಂದು ಭಗವಂತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.ಕೌತಾಳಂ ಶ್ರೀ ಗುರು ಜಗನ್ನಾಥ ಸೇವಾ ಸಮಿತಿಯವರು ಕಲ್ಯಾಣೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಪಲಿಮಾರು ಶ್ರೀಗಳ ಉಪಸ್ಥಿತಿಯಲ್ಲಿ ಎಲ್ಲವೂ ಸಾಂಗವಾಗಿ ನೆರವೇರಿತು. ಕೆ. ಅಪ್ಪಣ್ಣಾಚಾರ್ಯ, ಸದಾನಂದ ಶಾಸ್ತ್ರಿಗಳು, ಸಂಪನ್ನ ಮುತಾಲಿಕ್, ಕಂಪ್ಲಿ ಗುರುರಾಜಾಚಾರ್ ಸೇರಿ ಮಹೋತ್ಸವ ಸಮಿತಿಯವರೆಲ್ಲ ಇದ್ದರು.