ದಾವಣಗೆರೆಯಲ್ಲಿ ಲಾಕ್‌ಡೌನ್‌ನಲ್ಲಿ ಸಂಚಾರ ದಂಡ ಹಾಕಿದ್ದಕ್ಕೆ ಪ್ರತಿಭಟನೆ

ದಾವಣಗೆರೆ,ಮೇ.೩- ಕೊರೊನಾ ಎರಡನೇ ಅಲೆಗೆ ಜೀವ ಉಳಿದರೆ ಸಾಕಪ್ಪ ಎನ್ನುವ ವಾತಾವರಣ ನಿರ್ಮಾಣವಾದರೂ ಕೆಲ ಜನರು ಇನ್ನೂ ಬುದ್ಧಿ ಕಲಿತಿಲ್ಲ. ಸರ್ಕಾರ ಲಾಕ್ ಡೌನ್ ಅಸ್ತ್ರ ಬಳಸಿ ಜನರ ಓಡಾಟ, ಸಂಪರ್ಕ ಕಡಿತ ಮಾಡಿ ಕೊರೊನಾ ಕೊಂಡಿ ಕಳಚಲು ಮುಂದಾಗಿದೆ. ಆದರೆ, ದಾವಣಗೆರೆ ನಗರದಲ್ಲಿ ಕೊರೊನಾ ಭಯವಿಲ್ಲದೆ ಲಾಕ್ ಡೌನ್ ಸಮಯದಲ್ಲೂ ರಸ್ತೆಗಿಳಿದಿದ್ದಾರೆ. ಇಂಥವರಿಗೆ ಪೊಲೀಸರು ದಂಡ ಹಾಕಿ ಬಿಸಿ ಮುಟ್ಟಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಕೊಳ್ಳುವ ಸಮಯ ಮುಗಿದಿದ್ದರೂ ನಿನ್ನೆ ಜನರ ಓಡಾಟ ಹೆಚ್ಚಿದ್ದು, ದ್ವಿಚಕ್ರ ವಾಹನಗಳಲ್ಲಿ ಸಂಚಾರ ಹೆಚ್ಚಾಗಿತ್ತು.
ಹೀಗಾಗಿ, ಅನಗತ್ಯವಾಗಿ ಓಡಾಡುವ ವಾಹನಗಳ ತಡೆದು ಪೊಲೀಸರ ತಪಾಸಣೆ ನಡೆಸಿದರು. ಅನಗತ್ಯ ಓಡಾಟ ಮಾಡುವುದಕ್ಕೆ ದಂಡ ವಿಧಿಸಿದ್ದಕ್ಕೆ ವೃದ್ಧನೊಬ್ಬ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುವ ಮೂಲಕ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆಯ ನಗರ ರೈಲ್ವೆ ಸ್ಟೇಷನ್ ಮುಂಭಾಗದ ಹಳೇ ಪಿಬಿ ರಸ್ತೆಯಲ್ಲಿ ಘಟನೆ ನಡೆದಿದೆ. ಕಾಯಿಪೇಟೆಯ ನಿವಾಸಿ ಬಸವರಾಜ್ ಎಂಬ ವೃದ್ಧ ಪೊಲೀಸರ ವರ್ತನೆ ಖಂಡಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವೃದ್ಧ ಬಸವರಾಜ್ ತಮ್ಮ ಮಗನೊಂದಿಗೆ ಆಸ್ಪತ್ರೆಯಿಂದ ಬಂದು ಮೆಡಿಕಲ್ ಶಾಪ್ ಗೆ ಔಷಧಿ ತರಲು ಹೋಗುತ್ತಿದ್ದರು. ಈ ವೇಳೆ ರೈಲ್ವೆ ಷ್ಟೇಷನ್ ಮುಂಭಾಗದಲ್ಲಿ ಪೊಲೀಸರು ಹಿಡಿದು ಬೈಕ್ ಗೆ ೫೦೦ ರೂಪಾಯಿ ದಂಡ ಹಾಕಿದ್ದಾರೆ. ನಮಗ್ಯಾಕೆ ದಂಡ ಹಾಕುತ್ತಿದ್ದೀರಿ? ನಾವು ಔಷಧಿ ತರಲು ಹೋಗುತ್ತಿದ್ದೇವೆ ಎಂದು ರಶೀದಿ ತೋರಿಸಿದರೂ ಕೇಳದ ಪೊಲೀಸರು ೫೦೦ ರೂಪಾಯಿ ದಂಡ ವಿಧಿಸಿದ್ದಾರೆ.
ಇದರಿಂದ ಕೆರಳಿದ ವೃದ್ಧ ನಡು ರಸ್ತೆಯಲ್ಲಿ ಕುಳಿತು ಕೆಲಕಾಲ ಪ್ರತಿಭಟನೆ ನಡೆಸಿದರು. ಅಲ್ಲದೇ, ಆತನ ಮಗ ಕೂಡ ಪೊಲೀಸರೊಂದಿಗೆ ನಮಗ್ಯಾಕೆ ದಂಡ ಹಾಕಿದ್ದೀರಿ ಎಂದು ವಾಗ್ವಾದ ನಡೆಸಿದ್ದು, ಪೊಲೀಸರಿಗೆ ತಮ್ಮನ್ನು ಒಂದು ಬಾರಿ ಬಿಟ್ಟು ಬಿಡುವಂತೆ ಮನವಿ ಮಾಡಿಕೊಂಡರು. ಆದರೆ, ಅವರ ಮಾತನ್ನು ಕೇಳದ ಪೊಲೀಸರು ಇಲ್ಲವೇ ಇಲ್ಲ ಏನೇ ಆದರೂ ದಂಡ ಕಟ್ಟಿಯೇ ಹೋಗುವಂತೆ ಆತನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಬಳಿಕ ಬಡಾವಣೆ ಪೊಲೀಸ್ ಠಾಣೆ ಪಿಎಸ್ ಐ ಅರವಿಂದ್ ಕೂಡ ದಂಡ ಕಟ್ಟುವಂತೆ ವಾರ್ನಿಂಗ್ ಮಾಡಿದ್ದು, ವೃದ್ಧ ತಮ್ಮನ್ನು ಇದೊಂದು ಬಾರಿ ಬಿಡುವಂತೆ ಮನವಿ ಮಾಡಿದರೂ ಕೇಳಿಲ್ಲ.
ಆದರೆ, ನಾವು ನಿಜವಾಗಿಯೂ ಔಷಧಿ ತರಲು ಹೋಗುತ್ತಿದ್ದೇವೆ. ಬೇಕಾದರೆ ರಶೀದಿ ನೋಡಿ ಹೇಳಿ. ಇಲ್ಲವೇ ನಮ್ಮ ಜತೆಗೆ ಬನ್ನಿ ಎಂದರೂ ಪೊಲೀಸರು ಬಿಡದೆ ದಂಡ ವಿಧಿಸಿದ್ದಾರೆ. ದಾವಣಗೆರೆಯಲ್ಲಿ ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ಓಡಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಕಟ್ಟುನಿಟ್ಟಾಗಿ ದಂಡ ವಿಧಿಸುವ ಮೂಲಕ ಇಂಥವರ ವಿರುದ್ಧ ದಂಡ ಪ್ರಯೋಗಿಸಲು ದಾವಣಗೆರೆ ಪೊಲೀಸರು ಮುಂದಾಗಿದ್ದಾರೆ. ಆದರೆ, ಇದು ಬೇಕಾದವರನ್ನು ಬಿಟ್ಟು ಬೇಡವಾದವರಿಗೆ ದಂಡ ವಿಧಿಸಿ ಶಿಕ್ಷೆ ನೀಡುವುದು ಆಗಬಾರದು. ಆದರೆ, ಅನಗತ್ಯವಾಗಿ ಓಡಾಡುವವರಿಗೆ ಮಾತ್ರ ಶಿಕ್ಷೆ ವಿಧಿಸಿದರೆ ಒಳ್ಳೆಯದು.