ದಾವಣಗೆರೆಯಲ್ಲಿ ಮಹಾಂತೇಶ್ ಬೀಳಗಿಯವರೇ ಜಿಲ್ಲಾಧಿಕಾರಿಯಾಗಿ ಮುಂದುವರೆಯಲಿ

ದಾವಣಗೆರೆ.ಜ.೧೪; ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಜಿಲ್ಲೆಯಲ್ಲಿಯೇ ಮುಂದುವರೆಯಬೇಕೆಂದು   ದಿನೇಶ್ ಕೆ. ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಸುದ್ದಿಗೋಷ್ಠಿಯಲ್ಲಿಂದು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ ಅವರು,  ಜಿಲ್ಲಾಧಿಕಾರಿಗಳು ಎಂದರೆ ಕೇವಲ ಎಸಿ ಕಾರುಗಳಲ್ಲಿ ಸುತ್ತಾಡುತ್ತಾ ,  ಕಚೇರಿಯಲ್ಲಿ ಕುಳಿತು ಅಧಿಕಾರ ನಡೆಸುತ್ತಾರೆ ಎಂಬ ಮಾತನ್ನು ಸುಳ್ಳು ಮಾಡಿ ಜಿಲ್ಲೆಯ ಕೊನೆಯ ವ್ಯಕ್ತಿಯ ಹಾಗೂ ಕೊನೆಯ ಹಳ್ಳಿಯ ಜನರಿಗೂ ಸಹ ಸರ್ಕಾರಿ ಸೇವೆ ಹಾಗೂ ಸೌಲಭ್ಯ ಒದಗಿಸುವಲ್ಲಿ ಮಹತ್ತರ ಕಾರ್ಯನಿರ್ವಹಿಸಿದ ಅಧಿಕಾರಿ ಎಂದರೆ ನಮ್ಮ ಈಗಿನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಾಗಿದ್ದಾರೆ.ಜಿಲ್ಲಾಧಿಕಾರಿ ಎಂಬ ಹಮ್ಮು ಇಲ್ಲದೆ ಬಡವರ , ರೈತರ , ದಿನಗೂಲಿ ನೌಕರರ , ಮಹಿಳೆಯರ , ವಿದ್ಯಾರ್ಥಿಗಳ ಕಷ್ಟ – ಸುಖಗಳನ್ನು ಆಲಿಸುತ್ತಾ ಅವುಗಳಿಗೆ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.ಬೀಳಗಿಯವರನ್ನು ನಮ್ಮ ಜಿಲ್ಲೆಯಿಂದ ವರ್ಗಾಯಿಸಲಾಗುತ್ತಿದೆ ಎಂದು ಕೇಳಿ ಬಂದಿದ್ದು, ಅವರ ಅವಶ್ಯಕತೆ  ನಮ್ಮ ಜಿಲ್ಲೆಯ ಜನರಿಗೆ ಇದೆ. ಅವರನ್ನು ನಮ್ಮ ಜಿಲ್ಲೆಯಲ್ಲಿಯೇ ಮುಂದುವರಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಶೆಟ್ಟಿ ಹೇಳಿದರು.ಈ ಹಿಂದೆ ಶಿವರಾಮ್  ದಾವಣಗೆರೆ ಜಿಲ್ಲಾಧಿಕಾರಿಗಳಾಗಿದ್ದಾಗ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಜಿಲ್ಲಾಧಿಕಾರಿಗಳ ಹುದ್ದೆಗೆ ಅತಿ ಹೆಚ್ಚಿನ ಗೌರವವನ್ನು ಒದಗಿಸಿ ಕೊಟ್ಟಿದ್ದರು . ಅವರ ನಂತರ ಮಹಾಂತೇಶ್ ಆ ರೀತಿಯ ಸ್ಥಾನ ನಿರ್ವಹಿಸಿದ್ದಾರೆ ಎಂದರೆ ತಪ್ಪಾಗಲಾರದು.ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳ ತಂಡವನ್ನು ಕಟ್ಟಿಕೊಂಡು ಜಿಲ್ಲಾ ವ್ಯಾಪಿ ಸುತ್ತಾಡಿ ಜನರಿಗೆ ಜಾಗೃತಿ , ಆರೋಗ್ಯದ ಬಗ್ಗೆ ಕಾಳಜಿ , ಕೋವಿಡ್ ನಿಂದ ತತ್ತರಿಸಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸಾರ್ವಜನಿಕರು ಪರಿತಪಿಸುತ್ತಿದ್ದ ಸಂದರ್ಭದಲ್ಲಿ  ಎಲ್ಲರ ಕಷ್ಟಕ್ಕೆ ಸ್ಪಂದಿಸಿ ಸಾವಿರಾರು ಜನರ ಜೀವವುಳಿಸಿದ್ದಾರೆ.ಕೋವಿಡ್ ವ್ಯಾಕ್ಸಿನೇಷನ್ ಜಿಲ್ಲೆಯ ಕೊನೆಯ ಹಳ್ಳಿಗೂ ದೊರೆಯಿತು ಎಂದರೆ ಅದಕ್ಕೆ ಇವರ ಜಾಣ್ಮೆ ಹಾಗೂ ಕಾರ್ಯದಕ್ಷತೆ ಕಾರಣ. ಜನಸ್ನೇಹಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಜಿಲ್ಲೆಯಲ್ಲಿಯೇ ಮುಂದುವರೆಯಲಿ ಎಂಬುದು ನಮ್ಮ ಆಗ್ರಹ  ಎಂದರು.  ಎ.ನಾಗರಾಜ್, ಹರೀಶ್ ಹೆಚ್. ಬಸಾಪುರ ಗೋಷ್ಠಿಯಲ್ಲಿದ್ದರು.