ದಾವಣಗೆರೆಯಲ್ಲಿ ನ. 21, 22ರಂದು ಕಟ್ಟಡ ಕಾರ್ಮಿಕರ 3ನೇ ರಾಜ್ಯ ಸಮ್ಮೇಳನ

ಕಲಬುರಗಿ.ನ.17: ದಾವಣಗೆರೆಯಲ್ಲಿ ಇದೇ ನವೆಂಬರ್ 21 ಮತ್ತು 22ರಂದು ಕಟ್ಟಡ ಕಾರ್ಮಿಕರ 3ನೇ ರಾಜ್ಯ ಮಟ್ಟದ ಸಮ್ಮೇಳನ ಜರುಗಲಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಪ್ರಭುದೇವ್ ಯಳಸಂಗಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2006ರ ಮಾರ್ಚ್ 1ರಂದು ಅಂದಿನ ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿಯವರು ದಾವಣಗೆರೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಟ್ಟಡ ಕಾರ್ಮಿಕರ ಸಮ್ಮೇಳನದಲ್ಲಿ ಕಲ್ಯಾಣ ಮಂಡಳಿಯನ್ನು ರಚಿಸುವ ಘೋಷಣೆ ಮಾಡಿದರು. ಪರಿಣಾಮವಾಗಿ ಸತತ ಹೋರಾಟಗಳಿಂದಾಗಿ ಕಟ್ಟಡ ಕಾರ್ಮಿಕರಿಗೆ ವಿವಿಧ ಯೋಜನೆಗಳು ಸಿಗುವಂತಾಗಿದೆ ಎಂದರು.
ಕೋವಿಡ್ 19 ಪ್ರಾರಂಭವಾದಾಗಿನಿಂದ ಮಂಡಳಿಯ ಯೋಜನೆಗಳು ರಾಜ್ಯದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ನೈಜ ಕಟ್ಟಡ ಕಾರ್ಮಿಕರ ಶ್ರಮವನ್ನು ದಹನ ಮಾಡಲು ಕಟ್ಟಡ ಕಾರ್ಮಿಕರಿಗೆ ಪ್ರಯೋಜನವಾಗದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ಮಂಡಳಿ ನಿಯಮಗಳನ್ನು ಗಾಳಿಗೆ ತೂರಿ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ದೂರ ಇಡುವ ಮೂಲಕ ಸಂಘಟನೆಗಳನ್ನು ದಮನ ಮಾಡಲು ಕಾರ್ಮಿಕ ಸಂಘಗಳ ಮನವಿಯನ್ನು ಧಿಕ್ಕರಿಸಿ ಬೇಕಾಬಿಟ್ಟಿಯಾಗಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಕಟ್ಟಡ ಕಾರ್ಮಿಕರ ಫನಾನುಭವಿಗಳು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರೂ ಕಾರ್ಮಿಕ ನಿರೀಕ್ಷಕರು ಮಂಜೂರು ಮಾಡಿರುವ ಅರ್ಜಿಗಳನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ವಿನಾಃ ಕಾರಣ ಮಂಜೂರು ಮಾಡದೇ ವಿಳಂಬ ಮಾಡುತ್ತಿದ್ದಾರೆ. ಅಲ್ಲದೇ ತಮಗೆ ಬೇಕಾದವರ ಅರ್ಜಿಗಳನ್ನು ಮಾತ್ರ ಮಂಜೂರಿ ಮಾಡಿದ್ದಾರೆ. ಆದರೆ ನಿಜವಾದ ಬಡ ಕಟ್ಟಡ ಕಾರ್ಮಿಕ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸದೇ ಫಲಾನುಭವಿಗಳ ಮನೆಗೆ ಹೋಗಿ ಬಿಳಿ ಹಾಳೆಯ ಮೇಲೆ ಸಹಿಯನ್ನು ತೆಗೆದುಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಹಾಗೂ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಸರ್ಕಾರದ ವತಿಯಿಂದ ದೊರೆಯಬೇಕಾದ ಮದುವೆ ಧನಸಹಾಯ, ಶಿಷ್ಯವೇತನ, ಹೆರಿಗೆ ವೇತನ, ಗೃಹಭಾಗ್ಯ, ಪಿಂಚಣಿ, ಅಪಘಾತ ವಿಮೆ ಮುಂತಾದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸೆಂಟ್ರಿಂಗ್, ಮೆಷನ್, ಎಲೆಕ್ಟ್ರಿಕಲ್, ಪಲಮನರ್, ಪೆಂಟಿಂಗ್, ಫರ್ನಿಚರ್ ಹಾಗೂ ನ್ಯೂಟ್ರಿಶನ್‍ಕಿಟ್, ಯುಮಿನಿಟಿ ಕಿಟ್ ಹೀಗೆ ಹಲವಾರು ಕಿಟ್‍ಗಳನ್ನು ಕೊಡುವುದು ಅಲ್ಲದೇ ಕಾರ್ಮಿಕರಿಗೆ ಬೇಡಿಕೆ ಇಲ್ಲದ ಮಿನಿ ಆಸ್ಪತ್ರೆ, ಅಂಬುಲೆನ್ಸ್ ಎಲ್ಲ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿಗಳಿಗೆ ಕಳಿಸಿ ಕಾರ್ಮಿಕರಿಗೆ ಪ್ರಯೋಜನ ಆಗದೇ ಒಂದು ದಿನ ಬಳಕೆಯಾಗದೇ ಕಚೇರಿಗಳಲ್ಲಿ ತುಕ್ಕು ಹಿಡಿದು ನಿಂತಿವೆ. ಒಂದು ಗಾಡಿಗೆ 75 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಮಾರುಕಟ್ಟೆಯ ಮುಖ್ಯ ಬೆಲೆಗಿಂತ ಹೆಚ್ಚು ಖರ್ಚು ತೋರಿಸಲಾಗಿದೆ. ಕಿಟ್‍ಗಳು ಕಳಪೆ ಮಟ್ಟದ್ದಾಗಿವೆ. ಈ ಕುರಿತು ಅವ್ಯವಹಾರವಾಗಿದ್ದು, ನ್ಯಾಯಾಂಗ ತನಿಖೆಯ ಮೂಲಕ ತಪ್ಪಿತಸ್ಥ ಸಚಿವರು ಹಾಗೂ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಕುರಿತು ರಾಜ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಹಾಗೂ ರಾಜ್ಯ ಮಟ್ಟದ ಹೋರಾಟವನ್ನೂ ಸಹ ರೂಪಿಸಲಾಗುವುದು ಮತ್ತು ನ್ಯಾಯಾಲಯದಲ್ಲಿಯೂ ಸಹ ದಾವೆ ಹೂಡುವ ಕುರಿತು ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾನಪ್ಪ ಇಜೇರಿ, ಯಲ್ಲಪ್ಪ ಮಾಂಗ್, ಶಿವಲಿಂಗಮ್ಮ ಲೆಂಗಟಿಕರ್, ಕಲ್ಯಾಣಿ ತುಕ್ಕಾಣಿ, ಲಕ್ಷ್ಮೀ ದೊಡ್ಡಮನಿ, ದತ್ತಾತ್ರೇಯ್ ಕಬಾಡೆ ಮುಂತಾದವರು ಉಪಸ್ಥಿತರಿದ್ದರು.