ದಾವಣಗೆರೆಯಲ್ಲಿ ನಾಳೆ ಬೃಹತ್ ಬಹಿರಂಗ ಸಭೆ 

ದಾವಣಗೆರೆ.ಮಾ.೩: ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ನಾಳೆ ಆಮ್ ಆದ್ಮಿ ಸಮಾವೇಶ ನಡೆಯಲಿದೆ.ನಾಳೆ ಮಧ್ಯಾಹ್ನ ೧೨ ಕ್ಕೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಾನ್ ಸಿಂಗ್ ಮಾನ್ ಪಾಲ್ಗೊಳ್ಳಲಿದ್ದಾರೆ.ಮುಂಬರುವ ವಿಧಾನಸಭಾ ಚುನಾವಣೆ ಪ್ರಯುಕ್ತ  ರಾಜ್ಯಮಟ್ಟದ ಆಮ್ ಆದ್ಮಿ ಪಕ್ಷದ ಸಮಾವೇಶ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಜರುಗಲಿದೆಇದಕ್ಕಾಗಿ ಸಕಲ ಸಿದ್ಧತೆ ಭರದಿಂದ ಸಾಗಿದೆ. ಈ ಸಮಾವೇಶದಲ್ಲಿ ಸುಮಾರು 50 ರಿಂದ 60 ಸಾವಿರ ಜನರು ಭಾಗವಹಿಸಲಿದ್ದಾರೆ. ಬ್ಲಾಕ್ ಮತ್ತು ಸರ್ಕಲ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಪ್ರಮಾಣ ವಚನ ಬೋಧನೆ ಹಾಗೂ ಭಾರೀ ಬಹಿರಂಗ ಸಭೆ ನಡೆಯಲಿದೆ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಉಪಾಧ್ಯಕ್ಷ ವಿಜಯ ಶರ್ಮಾ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹನಿ, ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ರಾಜ್ಯದೆಲ್ಲೆಡೆ ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷ ಚುನಾವಣೆಗೆ ಸಜ್ಜಾಗಿದೆ.189 ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿದ್ದಾರೆ. ಮತ್ತೆ ಕೆಲವೆಡೆ ಇಬ್ಬರು ಆಕಾಂಕ್ಷಿಗಳಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ರಾಜ್ಯ ಮುಖಂಡರು ತಿಳಿಸಿದ್ದಾರೆ. ಈ ಬಗ್ಗೆ ದಾವಣಗೆರೆ ಉಸ್ತುವಾರಿ ವಹಿಸಿರುವ ಡಾ. ವಿಶ್ವನಾಥ್ ಹಾಗೂ ಎಎಪಿ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮಾ ಮಾತನಾಡಿ, ದಾವಣಗೆರೆಯ ಹೈಸ್ಕೂಲ್ ಮೈದಾನದಿಂದ ವಿಧಾನಸಭಾ ಚುನಾವಣಾ ಪ್ರಚಾರ ಅಧಿಕೃತವಾಗಿ ಆರಂಭವಾಗಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರೀತಿ 50 ಕೋಟಿ ರೂಪಾಯಿ ಖರ್ಚು ಮಾಡಿ ಚುನಾವಣೆ ಮಾಡಲ್ಲ. ದಾವಣಗೆರೆಯ ಎಲ್ಲಾ ಕ್ಷೇತ್ರಗಳಲ್ಲೂ ಆಕಾಂಕ್ಷಿಗಳಿದ್ದಾರೆ. ಪಕ್ಷದ ಪದಾಧಿಕಾರಿಗಳೇ ಸುಮಾರು ಹದಿನೈದರಿಂದ 20 ಸಾವಿರ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದು ಹೇಳಿದರು.ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ‌ ಮಾತನಾಡಿ, ದಾವಣಗೆರೆ ಎಲ್ಲಾ ರಾಜಕೀಯ ಪಕ್ಷಗಳಿಗೂ ನೆಚ್ಚಿನ ತಾಣ. ಎಲ್ಲಾ ಪಕ್ಷಗಳೂ ದೊಡ್ಡ ದೊಡ್ಡ ಸಮಾವೇಶ ನಡೆಸುತ್ತಿವೆ. ನಾವು ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸುತ್ತೇವೆ. ನಲ್ವತ್ತು ಸಾವಿರ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.