ದಾವಣಗೆರೆಯಲ್ಲಿ ತಲೆಯೆತ್ತಿದ ಅಕ್ರಮ ಕಟ್ಟಡಗಳು

(ಸಂಜೆವಾಣಿ ಪ್ರತಿನಿಧಿಯಿಂದ)
ದಾವಣಗೆರೆ, ಆ. ೫- ರಾಜ್ಯದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ ದಾವಣಗೆರೆ. ಬೆಂಗಳೂರು ಮಹಾನಗರವನ್ನು ಹೊರತು ಪಡಿಸಿದರೆ ಭೂಮಿಗೆ ಚಿನ್ನದ ಬೆಲೆ ದಾವಣಗೆರೆಯಲ್ಲಿ ಇದೆ. ಹೀಗಾಗಿ ಕೆಲವು ಕಾಣದ ಕೈಗಳು ಸರ್ಕಾರಿ, ಅರೆ ಸರ್ಕಾರಿ ಜಾಗಗಳನ್ನು ಗುರುತಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಾನೂನು ಬಾಹಿರವಾಗಿ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದಲ್ಲದೇ, ಅಕ್ರಮ ಬಡಾವಣೆಗಳನ್ನು ನಿರ್ಮಿಸಿ ಅಮಾಯಕರಿಗೆ ವಂಚನೆ ಮಾಡುತ್ತಿವೆ. ಅಲ್ಲದೇ ಇಂತವರನ್ನು ನಂಬಿ ನಿವೇಶನ, ಮನೆಗಳನ್ನು ಖರೀದಿಸುತ್ತಿರುವ ಜನತೆ ಮೋಸಕ್ಕೆ ಬಲಿಯಾಗುತ್ತಿದ್ದಾರೆ.ಇದಲ್ಲದೇ ಮಹಾನಗರ ಪಾಲಿಕೆಯಿಂದ ಅಚಿತಿಮ ಅನುಮತಿ ಪಡೆದ ನಕ್ಷೆಗೆ ಅನುಗುಣವಾಗಿ ಮನೆಗಳನ್ನು ನಿರ್ಮಿಸದೇ, ಕೊನೆ ಪಕ್ಷ ಸೆಟ್‌ಬ್ಯಾಕ್ ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿ ಬಹುಮಹಡಿಗಳ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾದ ಪಾಲಿಕೆಯ ಅಧಿಕಾರಿಗಳು ಕೂಡ ಕೈಕಟ್ಟಿ ಕುಳಿತಿದ್ದಾರೆ.
ನಕ್ಷೆ ಮಂಜೂರಾತಿ ಉಲ್ಲಂಘಿಸಿರುವ ಮತ್ತು ನಕ್ಷೆ ಇಲ್ಲದೆಯೇ ಕಟ್ಟಿರುವ ಕಟ್ಟಡಗಳ ಸಮೀಕ್ಷೆಯನ್ನು ದಾವಣಗೆರೆ ಮಹಾನಗರ ಪಾಲಿಕೆ ನಡೆಸಬೇಕಾಗಿದೆ. ಇದರಿಂದಾಗಿ ಕೊನೆ ಪಕ್ಷ ನಕ್ಷೆಯೇ ಇಲ್ಲದೆ ಕಟ್ಟಿರುವ ಮನೆಗಳನ್ನು ಪತ್ತೆ ಹಚ್ಚ ಬಹುದಾಗಿದೆ. ಅಲ್ಲದೇ ಸೆಟ್‌ಬ್ಯಾಕ್ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸುತ್ತಿರುವ ಬಹುಮಹಡಿ ಕಟ್ಟಡಗಳಿಗೆ ಅಂಕುಶ ಬೀಳದಂತಾಗಿದೆ. ಕೇವಲ ಬೆಂಗಳೂರು ನಗರಕ್ಕೆ ಸೀಮತವಾಗಿದ್ದ ಬಿಲ್ಡರ್‍ಸ್‌ಗಳು ಇದೀಗ ಬೆಣ್ಣೆ ನಗರಿ ದಾವಣಗೆರೆಗೂ ಕಾಲಿಟ್ಟಿದ್ದು, ನಿವೇಶನ ಮತ್ತು ಮನೆಗಳ ದರವನ್ನು ತಮಗೆ ಬೇಕಾದಂತೆ ಏರಿಕೆ ಮಾಡಿದ್ದಾರೆ. ಇದಲ್ಲದೇ ಕೆಲ ಮನೆ, ನಿವೇಶನ ಕೊಡಿಸುವ ಬೋಕರ್‌ಗಳು ಬಿಲ್ಡರ್‍ಸ್ ಮತ್ತು ಮಾಲೀಕರೊಂದಿಗೆ ಪಾಲಿಕೆಯ ಕೆಲ ಅಧಿಕಾರಿಗಳು, ಸಿಬ್ಬಂದಿಗಳು ಶಾಮೀಲಾಗಿ ಇಂತಹ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ತಡೆ ಒಡ್ಡುತ್ತಿಲ್ಲ. ಇದರ ಪರಿಣಾಮ ನಕ್ಷೆ ಮಂಜೂರಾತಿ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡಗಳನ್ನು ನಿರ್ಮಿಸುವುದು ಅವ್ಯಾಹತವಾಗಿ ನಡೆಯುತ್ತಲೇ ಇದೆ.
ಇದು ಕೇವಲ ಸರ್ಕಾರಿ ಭೂಮಿಗೆ ಸೀಮಿತವಾಗದೇ ರಾಜಕಾಲುವೆ, ಉದ್ಯಾನವನ, ಬಂಡೀಜಾಡು, ಖರಾಬು ಜಾಗ, ಹೈಟೆನ್ಷನ್ ಲೈನ್ ಅಡಿಯಲ್ಲಿ ಬರುವ ಭೂಮಿ, ಬಫ್‌ರ್‌ಜೂನ್‌ನಂತಹ ಜಾಗಗಳು ಸಹ ಖಾಸಗಿ ಬಿಲ್ಡರ್‍ಸ್‌ಗಳ ಕೈಗೆ ಸಿಕ್ಕಿ ನಿವೇಶನಗಳಾಗಿ ಮಾರ್ಪಟ್ಟು, ಅಮಾಯಕರಿಗೆ ಮಾರಾಟ ಮಾಡುತ್ತಿದ್ದಾರೆ. ಇಂತಹ ಹಲವಾರು ನಿದರ್ಶನಗಳು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಕ್ಕಿಗೆ ಗಂಟೆ ಕಟ್ಟುವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಇತ್ತೀಚೆಗಷ್ಟೇ ಪಾಲಿಕೆಯಲ್ಲಿ ಆಯುಕ್ತರು, ಉಪ ಆಯುಕ್ತರ ಗಮನಕ್ಕೆ ಬಾರದಂತೆ ಉದ್ಯಾನವನವನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಲಿಕೆ ಆಯುಕ್ತರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಇದಲ್ಲದೇ ಇನ್ನು ಹಲವು ನಿವೇಶನಗಳನ್ನು ಇದೇ ರೀತಿ ಮಾಡಿದ ಆರೋಪದ ಮೇಲೆ ಇನ್ನು ಐದಾರು ಜನ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳನ್ನು ಅಮಾನತು ಮಾಡುವ ಸಾಧ್ಯತೆಗಳಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.ನಕ್ಷೆ ಮಂಜೂರಾತಿಗೆ ವಿರುದ್ಧವಾಗಿ ನಿರ್ಮಾಣಗೊಳ್ಳುವ ಕಟ್ಟಡಗಳ ಉಲ್ಲಂಘನೆ ಮಿತಿಯು ಹೆಚ್ಚಾಗಿದೆ.