ದಾವಣಗೆರೆಯಲ್ಲಿ ಡೀಲ್ ಆಗಿದ್ದು ಕಾಂಗ್ರೆಸ್ – ಬಿಜೆಪಿ ನಡುವೆ: ಜಿ. ಬಿ. ವಿನಯ್ ಕುಮಾರ್

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೯; ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮತದಾನ ಮುಗಿದ ಮಾರನೇ ದಿನವೂ ಬ್ಯುಸಿಯಾಗಿದ್ದರು. ಮತದಾನ ಮುಗಿಯಿತು ಎಂದು ರಿಲ್ಯಾಕ್ಸ್ ಗೆ ಹೋಗದೇ ಎಂದಿನಂತೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.ಎಸ್. ಎಸ್. ಬಡಾವಣೆಯಲ್ಲಿನ ಗೃಹ ಕಚೇರಿಯಲ್ಲಿ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರ ಜೊತೆ ಸಭೆ ನಡೆಸಿದರು. ಈ ವೇಳೆ ಮತದಾನದ ಕುರಿತಂತೆ ಮಾಹಿತಿ ನೀಡಿದರು. ಏನೆಲ್ಲಾ ಆಯಿತು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಿದರು.ಈ ವೇಳೆ ಮಾತನಾಡಿದ ಜಿ. ಬಿ. ವಿನಯ್ ಕುಮಾರ್ ಅವರು, ಕಳೆದ ಒಂದು ತಿಂಗಳಿನಿಂದ ಹಗಲಿರುಳು ಶ್ರಮಿಸಿ ಒಂದೊಳ್ಳೆಯ ಫಲಿತಾಂಶದ ಭರವಸೆ ಮೂಡಿಸಿದ್ದೀರಿ. ಹಗಲಿರುಳು ಶ್ರಮಿಸಿ ಯಶಸ್ವಿ ಚುನಾವಣೆ ಮಾಡಿದ ಎಲ್ಲಾ ಅಭಿಮಾನಿಗಳು, ಹಿತೈಷಿಗಳು, ಬಂಧು ಭಗಿನಿಯರು, ಸಂಘಟನೆ, ಸಂಘ ಸಂಸ್ಥೆಗಳ ವಿವಿಧ ಸ್ಥರದ ಎಲ್ಲಾ ಪ್ರಮುಖರು, ಸ್ನೇಹಿತರು, ಕುಟುಂಬ ವರ್ಗದವರು, ಅಭಿಮಾನಿಗಳು, ಹಿತೈಷಿಗಳು ಕೆಲಸ ಮಾಡಿದ್ದಾರೆ. ನನ್ನ ಜೊತೆ ನಿಂತಿದ್ದಾರೆ.ಅವರು ತೋರಿದ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ ಎಂದರು.ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾನದ ಪ್ರಮಾಣವೂ ಹೆಚ್ಚಳವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಸ್ವಾಭಿಮಾನಿ ಗೆಲುವು ಆಗಲಿದೆ. ಮತದಾರರು ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸ ಇದೆ.ನೋಡೋಣ. ಜೂನ್ 4ಕ್ಕೆ ಫಲಿತಾಂಶ ಇದ್ದು, ಅಲ್ಲಿಯವರೆಗೆ ಕಾಯೋಣ ಎಂದು ಹೇಳಿದರು.ನಿಸ್ವಾರ್ಥ, ಸ್ವಾಭಿಮಾನದಿಂದ ಪ್ರತಿಯೊಂದು ಬೂತ್ ನಲ್ಲಿಯೂ ಹೋರಾಟ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿಯೂ ಕೆಲಸ ಮಾಡಿ ಪ್ರಜಾಪ್ರಭುತ್ವದ ಗೆಲುವಿಗೆ ಶ್ರಮಿಸಿದ್ದು, ಎಲ್ಲರಿಗೂ ಹೃದಯದಾಳದಿಂದ ತುಂಬು ಹೃದಯದಿಂದ ಧನ್ಯವಾದ ಅರ್ಪಿಸುತ್ತೇನೆ. ಮೂರರಿಂದ ಮೂರುವರೆ ಲಕ್ಷ ಮತಗಳು ನನಗೆ ಸಿಗಬಹುದು ಎಂಬ ವಿಶ್ವಾಸ ಇದೆ. ನಗರ ಪ್ರದೇಶಗಳಲ್ಲಿ ನನಗೆ ಮತ ಹಾಕಿದ್ದರೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಾನು ಸ್ವಾಭಿಮಾನಿಯಾಗಿ ಕಣಕ್ಕಿಳಿದಿದ್ದೆ. ಯಾರಿಗೂ ದುಡ್ಡು ಹಂಚಿಲ್ಲ. ಹಣದ ಆಮೀಷವೊಡ್ಡಿಲ್ಲ. ಮತ ಖರೀದಿ ಮಾಡದೇ ಪ್ರಜಾಪ್ರಭುತ್ವ, ಸಂವಿಧಾನದ ಆಶಯದಂತೆ ನಡೆಸಿದ್ದೇವೆ. ಇಲ್ಲಿ ಡೀಲ್ ಆಗಿದ್ದು ಜಿ. ಬಿ. ವಿನಯ್ ಕುಮಾರ್ ಮತ್ತು ಬಿಜೆಪಿ ಮಧ್ಯೆ ಹಾಗೂ ಕಾಂಗ್ರೆಸ್ ಜೊತೆ ಅಲ್ಲ. ನಿಜವಾಗಿಯೂ ಡೀಲ್ ಆಗಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ. ಮುಂದಿನ ದಿನಗಳಲ್ಲಿ ಜನರಿಗೆ ಇದು ಗೊತ್ತಾಗುತ್ತದೆ ಎಂದರು. ಸ್ವಾಭಿಮಾನಿಯಾಗಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೇ ಕೊನೆಯವರೆಗೂ ಹೋರಾಟ ನಡೆಸಿದ್ದೇನೆ. ನನ್ನ ಜೊತೆಗೆ ನನ್ನ ತಂಡ ಹಾಗೂ ಜಿಲ್ಲೆಯ ಸ್ವಾಭಿಮಾನಿಗಳೆಲ್ಲರೂ ನಿಂತಿದ್ದು, ಇನ್ನು ಎರಡರಿಂದ ಮೂರು ದಿನಗಳಲ್ಲಿ ದೊಡ್ಡ ಸಭೆ ನಡೆಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.ಪ್ರತಿಯೊಂದು ಊರಲ್ಲಿಯೂ ಐದರಿಂದ ಹದಿನೈದು ನಿಷ್ಠಾವಂತ, ಪ್ರಾಮಾಣಿಕ, ನಿಸ್ವಾರ್ಥ, ನಾಯಕತ್ವ ಹೊಂದಿದವರು ಇದ್ದಾರೆ. ನಿಮ್ಮ ಜೊತೆ ನಾನು ಸದಾ ಇರುತ್ತೇನೆ. ಪ್ರತಿಕ್ಷಣವೂ ಇರುತ್ತೇನೆ. ಯಾವಾಗಲೂ ನಿರಂತರವಾಗಿ ಇದೇ ಒಡನಾಟ ಮುಂದುವರಿಸೋಣ. ಯಾವುದೇ ಸಭೆ, ಸಮಾರಂಭಗಳಿದ್ದರೂ ನೋವಿನಲ್ಲಿ, ಕಷ್ಟದಲ್ಲಿಯೂ ನನ್ನನ್ನು ಮರೆಯಬೇಡಿ. ನಿಮ್ಮ ಜೊತೆ ಇರುತ್ತೇನೆ. ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದರು. ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಜನಕಲಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ  ಪಿ.ಷಣ್ಮುಖ ಸ್ವಾಮಿ ಅವರ ಪುತ್ರಿ ಕುಮಾರಿ ಶಾಂತಲಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ಪಡೆದರು. ಮೃತಳ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.ನಿಮ್ಮ ಕುಟುಂಬಕ್ಕೆ ಭಗವಂತ ನೋವು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಜಿ. ಬಿ. ವಿನಯ್ ಕುಮಾರ್ ಅವರು ಪ್ರಾರ್ಥಿಸಿದರು.